ಗುತ್ತಿಗೆದಾರರಿಂದ ಗುಬ್ಬಿ ಶಾಸಕರು ಲಂಚ ಪಡೆದಿದ್ದಾರೆ: ದಿಲೀಪ್ ಕುಮಾರ್

| Published : Oct 22 2024, 12:12 AM IST

ಸಾರಾಂಶ

ಕೆಎಂಎಫ್ ಚುನಾವಣೆಗೆ ಗುಬ್ಬಿ ಶಾಸಕರು ಅವರ ಪತ್ನಿಯನ್ನು ನಿಲ್ಲಿಸಿ ಚುನಾವಣೆ ನಡೆಸಲು ಹೇಮಾವತಿ ಲಿಂಕ್ ಕೆನಾಲ್ ಗುತ್ತಿಗೆದಾರರಿಂದ ಕಮಿಷನ್ ಪಡೆದು ತಾಲೂಕಿನ ರೈತರ ಹಿತವನ್ನು ಮರೆತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಗುಬ್ಬಿಯಲ್ಲಿ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.

ಹೇಮಾವತಿ ಕೆನಾಲ್‌ ಕಾಮಗಾರಿಗೆ ಆಕ್ಷೇಪ: ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಗುಬ್ಬಿ

ಕೆಎಂಎಫ್ ಚುನಾವಣೆಗೆ ಗುಬ್ಬಿ ಶಾಸಕರು ಅವರ ಪತ್ನಿಯನ್ನು ನಿಲ್ಲಿಸಿ ಚುನಾವಣೆ ನಡೆಸಲು ಹೇಮಾವತಿ ಲಿಂಕ್ ಕೆನಾಲ್ ಗುತ್ತಿಗೆದಾರರಿಂದ ಕಮಿಷನ್ ಪಡೆದು ತಾಲೂಕಿನ ರೈತರ ಹಿತವನ್ನು ಮರೆತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಗಂಗಸಂದ್ರ ಗ್ರಾಮದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಸಲು ಸುಮಾರು 50 ಲಾರಿಯಲ್ಲಿ 12 ಅಡಿ ಎತ್ತರದ ಬೃಹತ್ ಪೈಪುಗಳನ್ನು ಇಳಿಸಲು ಮುಂದಾಗಿದ್ದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.

ರಾಮನಗರ, ಮಾಗಡಿ ಭಾಗಗಳಿಗೆ ಯಾವುದೇ ಕಾರಣಕ್ಕೂ ಇಲ್ಲಿಂದ ನೀರು ಹರಿಸಲು ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಗೆ ಮರಣ ಶಾಸನ ಬರೆಯಲು ಸಿದ್ಧವಾಗಿದ್ದರೂ ಸಹ ಕೆಲವು ಕಾಂಗ್ರೆಸ್ ಶಾಸಕರು ಕಾಮಗಾರಿ ತಡೆಯಲು ಮುಂದಾಗಿಲ್ಲ. ಈ ಬೃಹತ್ ಪೈಪುಗಳ ಮೂಲಕ ನೀರು ಏನಾದರೂ ಹೋಗಲು ಆರಂಭವಾದರೆ ನಿಟ್ಟೂರಿನಿಂದ ಮುಂದಿನ ಭಾಗಗಳಿಗೆ ನೀರೇ ಹೋಗುವುದಿಲ್ಲ. ಗುಬ್ಬಿ, ತುರುವೇಕೆರೆ, ತುಮಕೂರು ಗ್ರಾಮಾಂತರ, ತುಮಕೂರು ನಗರ ಸೇರಿದಂತೆ ಇಡೀ ಜಿಲ್ಲೆಗೆ ನೀರಿನ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ತಿಳಿದಿದ್ದರೂ ಈ ಕಾಮಗಾರಿಯನ್ನು ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಆರಂಭವಾಗುತ್ತಿದೆ ಎಂದು ಹೇಳಿದರು.

ಗುಬ್ಬಿ ಶಾಸಕರು ಗುತ್ತಿಗೆದಾರರಿಂದ ಹಣ ಪಡೆದಿದ್ದರೆ ನಾನೇ ಆ ಹಣವನ್ನು ನೀಡುತ್ತೇನೆ. ನಮ್ಮ ಜೊತೆಯಲ್ಲಿ ಹೋರಾಟಕ್ಕೆ ಬನ್ನಿ. ನೀರಿನ ವಿಚಾರದಲ್ಲಿ ತಾವು ಗುಬ್ಬಿ ತಾಲೂಕಿನ ಜನರ ಜೊತೆ ನಿಲ್ಲಬೇಕು. ಅಧಿಕಾರದ ಆಸೆಯನ್ನು ಬಿಟ್ಟು ರಾಜೀನಾಮೆಯನ್ನು ನೀಡಿಯಾದರೂ ಹೋರಾಟಕ್ಕೆ ಬಂದು ಗುಬ್ಬಿ ತಾಲೂಕಿನ ರೈತರ ಹಿತವನ್ನು ಕಾಪಾಡಿ ಎಂದು ಕಿಡಿಕಾರಿದರು.

ಹಲವು ರೈತ ಹೋರಾಟಗಾರರು, ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾದರು.