ಬೆಲೆ ಏರಿಕೆ ಮಧ್ಯೆ ಬರುತ್ತಿರುವ ಗಣೇಶನ ಸ್ವಾಗತಕ್ಕೆ ಸಜ್ಜಾದ ಗುಬ್ಬಿ

| Published : Aug 26 2025, 01:04 AM IST

ಬೆಲೆ ಏರಿಕೆ ಮಧ್ಯೆ ಬರುತ್ತಿರುವ ಗಣೇಶನ ಸ್ವಾಗತಕ್ಕೆ ಸಜ್ಜಾದ ಗುಬ್ಬಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಗೌರಿ- ಗಣೇಶ ಹಬ್ಬಕ್ಕೆ ಗೌರಿ ಗಣೇಶನನ್ನು ಕೊಳ್ಳಲು ಜನರು ಬೆಲೆ ಏರಿಕೆ ನಡುವೆಯೂ ಖರೀದಿ ಜೋರಾಗಿದೆ. ಈ ವರ್ಷ ವರುಣ ಕೃಪೆಯಿಂದ ತಾಲೂಕಿನ ಕೆರೆಕಟ್ಟೆಗಳು ತುಂಬಿರುವುದರಿಂದ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ನೀರಿಗೆ ಬಿಡಲು ನೀರಿನ ತೊಂದರೆ ಇಲ್ಲದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಜನರು ಗಣೇಶ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಪಟ್ಟಣದಲ್ಲಿ ಗೌರಿ- ಗಣೇಶ ಹಬ್ಬಕ್ಕೆ ಗೌರಿ ಗಣೇಶನನ್ನು ಕೊಳ್ಳಲು ಜನರು ಬೆಲೆ ಏರಿಕೆ ನಡುವೆಯೂ ಖರೀದಿ ಜೋರಾಗಿದೆ. ಈ ವರ್ಷ ವರುಣ ಕೃಪೆಯಿಂದ ತಾಲೂಕಿನ ಕೆರೆಕಟ್ಟೆಗಳು ತುಂಬಿರುವುದರಿಂದ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ನೀರಿಗೆ ಬಿಡಲು ನೀರಿನ ತೊಂದರೆ ಇಲ್ಲದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಜನರು ಗಣೇಶ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲು ಮುಂದಾಗಿದ್ದಾರೆ. ತಾಲೂಕಿನಲ್ಲಿ ಸಂಪ್ರದಾಯ ಬದ್ಧವಾಗಿ ಗಣೇಶ ವಿಗ್ರಹಗಳನ್ನು ತಯಾರಿಸಿಕೊಂಡು ಬರುತ್ತಿರುವ ಕುಟುಂಬಗಳು ಬಿದರೆ, ಮಂಚಲದೊರೆ, ಗಂಗಯ್ಯನಪಾಳ್ಯ, ಗಳಗ, ಕಾಳಯ್ಯಪಾಳ್ಯ, ಜಿ.ಹರಿವೇಸಂದ್ರ ಇನ್ನೂ ಅನೇಕ ಗ್ರಾಮಗಳಲ್ಲಿ ಇದ್ದು, ಹಬ್ಬಕ್ಕೆ ಒಂಬತ್ತು ತಿಂಗಳಿಂದ ಕೆರೆಯಿಂದ ಮಣ್ಣು ತಂದು ಮಣ್ಣಿನ ಗಣೇಶ ವಿಗ್ರಹ ಮಾಡಲು ತಯಾರಾಗುತ್ತಾರೆ.

ಬಿದರೆ ಗ್ರಾಮದ ಈಶ್ವರ್ ಸುಮಾರು 40 ವರ್ಷಗಳಿಂದಲೂ ಇವರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕುಗಳಿಗೆ ಮಾರಾಟ ಮಾಡುತ್ತಾರೆ, ಜೊತೆಗೆ ತಾಲೂಕಿನಲ್ಲೂ ಗಣೇಶ ಮೂರ್ತಿಗಳಿಗೆ ಬೇಡಿಕೆ ಆಧಾರದ ಮೇಲೆ ಗಣೇಶನ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇವರ ಕುಟುಂಬ ಸಂಪ್ರದಾಯಬದ್ಧವಾಗಿ ಮಗ ಕುಶಲ್ ಹಾಗೂ ಪತ್ನಿ ಶಶಿಕಲಾ ಸಾಥ್ ಜೊತೆಗೂಡಿ ವಿಗ್ರಹ ತಯಾರಿಸುತ್ತಾರೆ‌.

ಬೆಲೆ ಏರಿಕೆ ಬಿಸಿ: ಪ್ರತಿ ಹಬ್ಬಗಳಲ್ಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಮೂಲಿ. ಅದರಂತೆ ಈ ಗೌರಿ-ಗಣೇಶ ಹಬ್ಬಕ್ಕೂ ಬೆಲೆಗಳು ಗಗನಕ್ಕೇರಿದ್ದು, ಸೇವಂತಿಗೆ ಕೆಜಿಗೆ 250 ರಿಂದ 300 ರು., ಮಾರು-150 ರು.ಗೆ, ಕನಕಾಂಬರ ಕೆಜಿಗೆ 1000, ಸೂಜಿ ಮಲ್ಲಿಗೆ ಕೆಜಿಗೆ 1000, ಕಾಕಡ-800, ಗುಲಾಬಿ ಕೆಜಿಗೆ -100 ರು., ಮಾರಿಗೋಲ್ಡ್ 250 ರು.ಗೆ ಮಾರಾಟವಾಗುತ್ತಿದೆ. ಹಣ್ಣುಗಳ ಬೆಲೆ ತುಸು ಏರಿಕೆಯಾಗಿದ್ದು, ಸೇಬು-250 ರು., ಮೋಸಂಬೆ-150, ದಾಳಿಂಬೆ-250, ದ್ರಾಕ್ಷಿ-200, ಪೈನಾಪಲ್ ಜೋಡಿಗೆ - 100 ರು.ಗೆ ಮಾರಾಟವಾಗುತ್ತಿದೆ. ಬಾಳೆಕಂದು ಜೋಡಿಗೆ 100 ರು., ಮಾವಿನಸೊಪ್ಪು ಒಂದು ಕಟ್ 50 ರು., ಗರಿಕೆ ಒಂದು ಕಟ್ 50 ರು.ಗೆ ಮಾರಾಟವಾಗುತ್ತಿದೆ.

ಬಾಳೆಹಣ್ಣಿನ ಬೆಲೆ ಏರಿಕೆ: ಪೂಜೆಗೆ ಪ್ರಮುಖವಾಗಿ ಬೇಕಾದ ಬಾಳೆಹಣ್ಣಿನ ಬೆಲೆ ಏರಿಕೆಯಾಗಿದ್ದು, ಏಲಕ್ಕಿ ಬಾಳೆ-120 ರು.ಗೆ ಮಾರಾಟವಾಗುತ್ತಿದ್ದು, ಪಟ್ಟಾಳೆ . 50 ರು.ಗೆ ಮಾರಾಟವಾಗುತ್ತಿದೆ.

ಮತ್ತೆ ದುಬಾರಿಯಾಯಿತು ತೆಂಗಿನಕಾಯಿ

ಕಳೆದ ಕೆಲದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ತೆಂಗಿನಕಾಯಿ ಮತ್ತೆ ಹಬ್ಬಕ್ಕೆ ಬೆಲೆ ಏರಿಕೆಯಾಗಿದ್ದು, ಗುಣಮಟ್ಟದ ತೆಂಗಿನಕಾಯಿಹಹ 50 ರು.ಗೆ ಮಾರಾಟವಾಗುತ್ತಿದೆ. ಕೆಜಿಗೆ 70 ರು. ನಿಗದಿಯಾಗಿದೆ. ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ. ಆಷಾಢ ಮಾಸದಿಂದಲೂ ಸ್ಥಿರತೆ ಕಾಯ್ದುಕೊಂಡಿದ್ದ ತರಕಾರಿಗಳ ಬೆಲೆ ಶ್ರಾವಣದಲ್ಲೂ ಸಹ ಮುಂದುವರೆದಿದೆ. ತರಕಾರಿಗಳ ಬೆಲೆ ಸೊಪ್ಪು ಹೊರತುಪಡಿಸಿ ಎಲ್ಲಾ ತರಕಾರಿಗಳ ಬೆಲೆ ಜಾಸ್ತಿಯೇ ಇದೆ. ಊಟಿ ಕ್ಯಾರೆಟ್ ಕೆಜಿಗೆ- 80 ರು., ನಾಟಿ ಬೀನ್ಸ್-80, ರಿಂಗ್ ಬೀನ್ಸ್-70, ಮೈಸೂರು ಬದನೆಕಾಯಿ-60, ನವಿಲುಕೋಸು-50, ಬೀಟರುಟ್ -50, ಆಲೂಗಡ್ಡೆ-30, ನುಗ್ಗೆ ಕಾಯಿ-ಕೆಜಿಗೆ 50, ಟೊಮ್ಯಾಟೊ-50 ರು.ಗೆ ಮಾರಾಟವಾಗುತ್ತಿದೆ. ಸೊಪ್ಪಿನ ಬೆಲೆ ತುಸು ಇಳಿಕೆಯಾಗಿದ್ದು, ಎಲ್ಲಾ ಸೊಪ್ಪುಗಳು ಕಟ್ಟಿಗೆ 15 ರಿಂದ 20 ರು.ಗೆ ಖರೀದಿಯಾಗುತ್ತಿದೆ. ಏನೇ ಬೆಲೆ ಏರಿಕೆಯಾದರು ಸಂಪ್ರದಾಯವನ್ನು ಬಿಡಬಾರದು ಎಂಬ ಉದ್ದೇಶದಿಂದ ಜನರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.

ಕೋಟ್: ಸಂಪ್ರದಾಯಬದ್ಧವಾಗಿ ನಮ್ಮ ಕುಲ ಕಸುಬನ್ನು ಕೈ ಬಿಡದೆ ಪ್ರತಿವರ್ಷವು ಮಣ್ಣಿನ ಗಣಪತಿ ಹಾಗೂ ಗೌರಿಯನ್ನು ನಮ್ಮ ಕುಟುಂಬದ ವತಿಯಿಂದ ತಯಾರಿಸಿ ತಾಲೂಕಿನ ಕಡಬ, ಗುಬ್ಬಿ ,ತುಮಕೂರು ಇನ್ನು ಕೆಲವು ಸ್ಥಳಗಳಲ್ಲಿ ಮಾರಾಟ ಭಾಗದಲ್ಲಿ ಮಾರಾಟ ಮಾಡುತ್ತಿದ್ದೇವೆ. ಗಣೇಶನ ತಯಾರಿ ತಯಾರಿಸಿ ಮಾರಾಟ ಮಾಡುವುದರಿಂದ ಲಾಭವಾಗಲಿ ನಷ್ಟವಾಗಲಿ ನಾವು ಕುಲ ಕಸುಬನ್ನು ಬಿಡುವುದಿಲ್ಲ.

-ಗಂಗಮ್ಮ, ವಿಗ್ರಹ ತಯಾರಕರು, ಸಿಂಗಸಂದ್ರ ತುರುವೇಕೆರೆ ತಾಲೂಕು.