ಸಾರಾಂಶ
ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಆದಿಜಾಂಬವ ಸಮುದಾಯದವರ ಬೀದಿಯಲ್ಲಿ ನೂತನ ಆರ್ಚ್ ಅಭಿವೃದ್ಧಿ ಕಾಮಗಾರಿಗೆ ಜಿಪಂ ಮಾಜಿ ಸದಸ್ಯ ಕೆ.ನವೀನ್ ಗುದ್ದಲಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಆದಿಜಾಂಬವ ಸಮುದಾಯದವರ ಬೀದಿಯಲ್ಲಿ ೨ಲಕ್ಷ ರು.ವೆಚ್ಚದ ನೂತನ ಆರ್ಚ್ ಅಭಿವೃದ್ಧಿ ಕಾಮಗಾರಿಗೆ ಜಿಪಂ ಮಾಜಿ ಸದಸ್ಯ ಕೆ. ನವೀನ್ ಗುದ್ದಲಿಪೂಜೆ ನೆರವೇರಿಸಿದರು.ನಂತರ ಅವರು ಮಾತನಾಡಿ, ತಮ್ಮ ಬಡಾವಣೆಗೆ ಪ್ರವೇಶಿಸುವ ಕಡೆ ನೂತನ ಆರ್ಚ್ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವೈಯಕ್ತಿಕವಾಗಿ ೨ಲಕ್ಷ ರು.ಧನಸಹಾಯ ಮಾಡಿದ್ದಾರೆ. ಹಣವನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡು, ಗುಣಮಟ್ಟದ ಆರ್ಚ್ ನಿರ್ಮಿಸಿಕೊಳ್ಳಬೇಕು, ಇದು ಒಂದು ಕಡೆಯಾದರೆ, ಸಮುದಾಯದವರು ವಾಸಿಸುವ ಬೀದಿಗಳಿಗೆ ಸಿಸಿ ರಸ್ತೆ ನಿರ್ಮಿಸಲು ಎಸ್ಸಿ, ಎಸ್ಟಿ ಯೋಜನೆಯಡಿ ೫೦ಲಕ್ಷ ರು.ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಸಿಸಿರಸ್ತೆ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಗ್ರಾಮದಲ್ಲಿ ಬಾಬುಜಗಜೀವನ್ ರಾಂ ಸಮುದಾಯ ಭವನ ನಿರ್ಮಾಣವಾಗಿ ಈವರೆಗೆ ಉದ್ಘಾಟನೆಯಾಗಿಲ್ಲ. ಉದ್ಘಾಟನೆಗೆ ಸಂಬಂಧಿಸಿದಂತೆ ಸಮುದಾಯದವರು ಶಾಸಕರ ಗಮನ ಸೆಳೆಯಬೇಕು, ಸಣ್ಣಪುಟ್ಟ ಕೆಲಸಗಳಿರಬಹುದು, ಈ ವಿಚಾರವನ್ನು ಅವರ ಗಮನಕ್ಕೆ ತಂದರೆ ಅವರು ಭವನದ ಉಳಿಕೆ ಕೆಲಸಗಳನ್ನು ಮಾಡಿಸುವತ್ತ ಗಮನಹರಿಸುತ್ತಾರೆ. ಭವನ ಉದ್ಘಾಟನೆಯಾದರೆ ಸಭೆ ಸಮಾರಂಭಗಳ ಆಯೋಜನೆಗೆ ಸಹಕಾರಿಯಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳ ವಿಚಾರ ಬಂದಾಗ ಸಮುದಾಯದವರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.ಗ್ರಾಮದ ನಿವೃತ್ತ ಶಿಕ್ಷಕ ಎಚ್.ಸಿ. ಮಾದಪ್ಪ ಮಾತನಾಡಿ, ಹಿಂದಿನ ಕ್ಷೇತ್ರದ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮದ ಅಭಿವೃದ್ದಿಗೆ ಗಮನಹರಿಸಲಿಲ್ಲ. ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ತಕ್ಷಣ ಸ್ಪಂದಿಸುತ್ತಾರೆ. ಉಳಿದ ಮೂರು ವರ್ಷದ ಅವಧಿಯಲ್ಲಿ ಅವರ ಅನುದಾನದಲ್ಲಿ ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ತಾವು ಮುಂದಾಗಬೇಕು ಎಂದು ಸಲಹೆ ನೀಡಿದರು.ಗುದ್ದಲಿ ಪೂಜೆಗೂ ಮುನ್ನ ಗ್ರಾಮದ ಅರ್ಚಕ ಮಹದೇವಸ್ವಾಮಿ ಕಳಸಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಬಿ. ಉದಯಕುಮಾರ್, ಗ್ರಾಪಂ ಮಾಜಿ ಸದಸ್ಯ ಎಚ್.ಎಂ.ನಾಗೇಶ್, ಮುಖಂಡರಾದ ಜಿ.ರೇವಪ್ಪ, ನಂಜುಂಡಸ್ವಾ,ಮಿ, ನಿವೃತ್ತ ಹಾಲುಪರೀಕ್ಷಕ ನಾಗರಾಜಪ್ಪ, ಗ್ರಾಪಂ ಸದಸ್ಯ ದೇವಯ್ಯ, ಆದಿಜಾಂಬವ ಸಮುದಾಯದ ಯಜಮಾನರಾದ ದುಂಡಯ್ಯ, ಬಲ್ಲಯ್ಯ ಸೇರಿದಂತೆ ಸಮುದಾಯದವರು ಭಾಗವಹಿಸಿದ್ದರು.