ಸಾರಾಂಶ
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ 2024-25ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ 2024-25ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಚೆಸ್ಕಾಂ, ಆರೋಗ್ಯ ಇಲಾಖೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ನೀರಾವರಿ ಇಲಾಖೆ, ಕಂದಾಯ ಇಲಾಖೆ, ಪಶು ವೇದಿಕೆ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು.ಆತುರು ಗ್ರಾಮದಲ್ಲಿ ನೀರಾವರಿ ನಿಗಮದಿಂದ ನೀಡಲಾದ 68 ಲಕ್ಷ ರು.ಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ವಿದ್ಯುತ್ ಇಲಾಖೆಯವರು ಕಳೆದ ಮೂರು ನಾಲ್ಕು ವರ್ಷಗಳಿಂದ ಕಾಮಗಾರಿ ಮಾಹಿತಿ ನೀಡುತ್ತಿಲ್ಲ. ಗ್ರಾಮ ಪಂಚಾಯಿತಿಗೆ ಪೂರ್ಣಗೊಂಡ ಕಾಮಗಾರಿ ಹಸ್ತಾಂತರಿಸಿರುವುದಿಲ್ಲ ಎಂದು ಗ್ರಾಮಸ್ಥ ರವಿ ಆರೋಪಿಸಿದರು.
ಸೆಸ್ಕ್ ಅಧಿಕಾರಿಗಳು ಮಾತನಾಡಿ, ಮೂರು ದಿನಗಳಲ್ಲಿ ಕಾಮಗಾರಿ ಹಸ್ತಾಂತರಿಸುವುದಾಗಿ ಮಾಹಿತಿ ನೀಡಿದರು.ಬಸವನಹಳ್ಳಿ ಗ್ರಾಮದ ಮಹೇಶ್ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಆಸ್ತಿಯಲ್ಲಿ ಅನಧಿಕೃತವಾಗಿ ಕಟ್ಟಡಗಳ ನಿರ್ಮಿಸುತ್ತಿದ್ದು, ಕಟ್ಟಡಗಳನ್ನು ಯಾಕೆ ತೆರವುಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಕಟ್ಟಡಗಳನ್ನು ತೆರವುಗೊಳಿಸಲು ಕೂಡಲೇ ಕ್ರಮ ವಹಿಸಲಾಗುವುದು ಎಂದು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದರು.
ತೆಪ್ಪದ ಕಂಡಿಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದ್ದು ನಿವಾಸಿಗಳಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸಲು ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗ್ರಾಮಸ್ಥರು ಆಕ್ಷೇಪಣೆ ವ್ಯಕ್ತಪಡಿಸಿದರು. ಇಲ್ಲಿನ ಕುಟುಂಬಗಳಿಗೆ ವಸತಿ ಮತ್ತು ನಿವೇಶನ ಕಲ್ಪಿಸಲು ಈಗಾಗಲೇ ಗುಡ್ಡೆಹೊಸೂರು ಹಾಗೂ ಬಳ್ಳೂರು ಗ್ರಾಮದಲ್ಲಿ 2.5 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು.ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಾದಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಪ್ರಾರ್ಥಿಸಿದರು. ಕಾರ್ಯದರ್ಶಿ ಕುಮಾರಸ್ವಾಮಿ ಸ್ವಾಗತಿಸಿದರು.