ಸಾರಾಂಶ
ಶಿವಮೊಗ್ಗದ ಗುಡ್ಡೇಕಲ್ ಅಡಿಕೃತ್ತಿಕೆ ಹರೋಹರ ಜಾತ್ರೆ ಮಹೋತ್ಸವ ಅಂಗವಾಗಿ ಸೋಮವಾರವೂ ಭಕ್ತರು ಕಾವಡಿಗಳನ್ನು ಹೊತ್ತು ಕಾಲ್ನಡಿಗೆಯಲ್ಲೇ ಗುಡ್ಡೆಕಲ್‌ಗೆ ಆಗಮಿಸಿ, ಭಕ್ತಿ ಮೆರೆದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಎರಡು ದಿನಗಳ ಅಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವ ಸೋಮವಾರ ಭಾರೀ ಭಕ್ತರ ಸಮೂಹದ ನಡುವೆ ಸಂಪನ್ನಗೊಂಡಿತು.ಸೋಮವಾರವೂ ಭಕ್ತರು ಕಾವಡಿಗಳನ್ನು ಹೊತ್ತು ಕಾಲ್ನಡಿಗೆಯಲ್ಲೇ ಗುಡ್ಡೆಕಲ್‌ಗೆ ಬಂದು ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದು ಹರಕೆ ತೀರಿಸಿದರು.
ಮಕ್ಕಳು, ಮಹಿಳೆಯರು, ಯುವಕರು, ವಯಸ್ಕರು ಹರಕೆ ಕಾವಾಡಿಗಳನ್ನು ಹೊತ್ತು ದೇವರಿಗೆ ಸಮರ್ಪಿಸಿದರು. ಸೋಮವಾರ ಗುಡ್ಡೇಕಲ್ ಭಾಗದಲ್ಲಿ ಜಾತ್ರೆಯೇ ನೆರೆದಿತ್ತು. ಸಾವಿರಾರು ಜನರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಜಿಲ್ಲೆಗಳಿಂದಲೂ ಭಕ್ತರು ಕಾಲ್ನಡಿಗೆ ಯಲ್ಲೇ ಹರಕೆ ಕಾವಾಡಿ ಹೊತ್ತು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.ಭಕ್ತರ ಪರಾಕಷ್ಟೆಯನ್ನು ಕಂಡು ನಗರದ ಜನರು ಮೂಕವಿಸ್ಮಿತರಾಗಿದ್ದು ಕಂಡುಬಂದಿತ್ತು. ಮೈ ಜುಮ್ ಎನ್ನುವಷ್ಟು ಅವರ ಭಕ್ತಿಯ ಪರಾಕಷ್ಠೆ ಹೆಚ್ಚುತ್ತಿತ್ತು. ಇನ್ನೂ ವಿಶೇಷವೆಂದರೆ ಕಾವಡಿ ಅಥವಾ ಇದನ್ನು ಚುಚ್ಚಿಕೊಂಡವರು ದೇವಾಲಯದ ತನಕ ಇಳಿಸದೇ ಹೋಗಬೇಕು. ದೇವಸ್ಥಾನದ ಸುತ್ತಮುತ್ತ ಸಾವಿರಾರು ಭಕ್ತರು ನೆರೆದಿದ್ದು, ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಹರಕೆ ಸಮರ್ಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಪೂಜೆಗಳು ನಡೆದವು. ಜಾತ್ರೆ ನಡೆಯುವ ಸುತ್ತಮುತ್ತಲ ಜಾಗಗಳಲ್ಲಿ ಅಂಗಡಿಗಳು ಕೂಡ ತೆರೆದಿದ್ದು, ವ್ಯಾಪಾರ ವಹಿವಾಟು ಕೂಡ ಜೋರಾಗಿ ಕಂಡು ಬಂದಿತ್ತು.
ವಿಶೇಷವಾಗಿ ಮಹಿಳೆಯರು ಹರಿಷಣ ಬಣ್ಣದ ಸೀರೆ ಧರಿಸಿ, ಪುರುಷರು ಹರಿಷಣ ಬಣ್ಣದ ಪಂಜೆ ಧರಿಸಿ ವಿಶೇಷ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಬರುವುದು ಕಂಡು ಬಂದಿತ್ತು. ದೇವಸ್ಥಾನದ ಸುತ್ತಮುತ್ತ ಪುಂಡರ ಹಾವಳಿಯನ್ನು ತಡೆಯಲು ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಕಳ್ಳತನವಾದರೆ ತಕ್ಷಣವೇ ಕಂಡು ಹಿಡಿಯಲು ಅನುಕೂಲವಾಗುವಂತೆ 35ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿಯೇ ವಿಶೇಷ ಪೊಲೀಸ್ ಠಾಣೆಯನ್ನು ತೆರೆಯಲಾಗಿತ್ತು. ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿತ್ತು. ಮಳೆ ವಿಶ್ರಾಂತಿ ಕೊಟ್ಟಿದ್ದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))