ಸಾರಾಂಶ
ಮನುಷ್ಯ ಎಷ್ಟೇ ಗಟ್ಟಿ, ಕಟ್ಟುಮಸ್ತಾಗಿದ್ದರೂ, ಸಣ್ಣ ಕಾರಣ ಅವನ ಪ್ರಾಣಹರಣಕ್ಕೆ ಕಾರಣ ಆಗಬಹುದು ಎಂಬುದಕ್ಕೆ ವ್ಯಕ್ತಿಯೊಬ್ಬರ ಸಾವು ಸಾಕ್ಷಿಯಾಗಿದೆ. ಸೊರಬ ತಾಲೂಕಿನ ಗುಡ್ಡೇಕೊಪ್ಪ ಗ್ರಾಮದ ಕೃಷಿಕ ಪಂಚಾಕ್ಷರಯ್ಯಗೆ ಶನಿವಾರ ಹೆಜ್ಜೇನು ಕಡಿದಿದ್ದು, ಅವರು ಮೃತಪಟ್ಟಿದ್ದಾರೆ.
ಸೊರಬ: ತಾಲೂಕಿನ ಗುಡ್ಡೇಕೊಪ್ಪ ಗ್ರಾಮದ ಕೃಷಿಕ ಪಂಚಾಕ್ಷರಯ್ಯ (60) ಅವರ ಮೇಲೆ ಶನಿವಾರ ಹೆಜ್ಜೇನು ದಾಳಿ ನಡೆದಿದ್ದು, ಜೇನುಗಳು ಕಡಿದ ಪರಿಣಾಮ ಅವರು ಮೃತಪಟ್ಟ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಪಂಚಾಕ್ಷರಯ್ಯ ಜಮೀನಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ದಾಳಿ ನಡೆಸಿವೆ. ರಕ್ಷಣೆಗೆ ಯಾರೂ ಇಲ್ಲದ ಕಾರಣ ಗದ್ದೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ಪಂಚಾಕ್ಷರಯ್ಯ ಅವರನ್ನು ಕಂಡ ಅಕ್ಕಪಕ್ಕದ ಜಮೀನಿನ ರೈತರು ತಕ್ಷಣ ಉದ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಅನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.ಪಂಚಾಕ್ಷರಯ್ಯ ಅವರಿಗೆ ಪತ್ನಿ ರತ್ನಮ್ಮ, ಪುತ್ರ ಮಲ್ಲಿಕಾರ್ಜುನ, ಪುತ್ರಿಯರಾದ ಸುಮಾ, ಸುಧಾ ಇದ್ದಾರೆ. ಭಾನುವಾರ ಮೃತರ ಅಂತ್ಯಕ್ರಿಯೆ ನಡೆಯಿತು. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- - - -31ಕೆಪಿಸೊರಬ02: ಪಂಚಾಕ್ಷರಯ್ಯ