ಸಾರಾಂಶ
ಕೂಡ್ಲಿಗಿ: ಬೆಟ್ಟಗುಡ್ಡಗಳ ಹಾಗೂ ಐತಿಹಾಸಿಕ ಸ್ಮಾರಕಗಳ ನಡುವೆ ಇಳಿ ಸಂಜೆ ಸೂರ್ಯ ಮರೆಯಾಗುತ್ತಿದ್ದಂತೆ, ಇತ್ತ ಗುಡೇಕೋಟೆಯ ಬೀದಿಗಳಲ್ಲಿ ಜಾನಪದ ಕಲಾಲೋಕ ಮೇಳೈಸಿತು. ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಕಲಾವಿದರು ಸಾಂಸ್ಕೃತಿಕ ಜಾನಪದ ಲೋಕವನ್ನೇ ಸೃಷ್ಟಿಸಿದರು.
ಇದು ಗುಡೇಕೋಟೆ ಉತ್ಸವದ ಮೊದಲ ದಿನದ ಶೋಭಾಯಾತ್ರೆಯಲ್ಲಿ ಕಂಡು ಬಂದ ದೃಶ್ಯ ವೈಭವ. ಶಿವಪಾರ್ವತಿ ದೇವಸ್ಥಾನದಿಂದ ಆರಂಭವಾದ ಜಾನಪ ವಾಹಿನಿಯ (ಶೋಭಾಯಾತ್ರೆ) ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಕಲಾವಿದರು ಹೆಜ್ಜೆ ಹಾಕಿದರು. ರಾಜಗಾಂಭೀರ್ಯದಿಂದ ಎತ್ತಿನಗಾಡಿಗಳು ಹೆಜ್ಜೆ ಹಾಕಿದರೆ, ಅಲಕೃಂತ ಎತ್ತಿನಗಾಡಿಯಲ್ಲಿ ತಾಯಿ ಭುವನೇಶ್ವರಿ, ಒನಕೆ ಓಬವ್ವ ಸ್ತಬ್ಧಚಿತ್ರಗಳ ಹಿಂದೆ ಸಾಗಿತು. ರಸ್ತೆಯುದ್ದಕ್ಕೂ ನಿಂತಿದ ಜನ ಕೈ ಮುಗಿದು ಭಕ್ತಿ ಸಮರ್ಪಿಸಿದರು.ಶಿವಪಾವರ್ತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಕಾಲೇಜ್ ಅವರಣದ ಒನಕೆ ಓಬವ್ವ ವೇದಿಕೆ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ತರೀಕೆರೆ ಪ್ರಕಾಶ ತಂಡ ವೀರಗಾಸೆ, ಕೂಡ್ಲಿಗಿ ದುಶೀಲ ಮತ್ತು ಮಹಿಳಾ ತಂಡದಿಂದ ಡೊಳ್ಳುಕುಣಿತ, ಕೂಡ್ಲಿಗಿ ತಾಲೂಕಿನ ಚೌಡಪುರ ಬಸವೇಶ್ವರ ತಂಡ ಮತ್ತು ಮೊರಬದ ಭದ್ರಪ್ಪ ಅವರಿಂದ ಸಮಾಳ ಮತ್ತು ನಂದಿಧ್ವಜ ಕುಣಿತ, ಕಟೀಲು ಕಿರಣಕುಮಾರ ಮತ್ತು ತಂಡ ಚಂಡೆ ಮುದ್ದಳೆ, ಓಬಳಾಪುರ ಓಬಣ್ಣ ಮತ್ತು ಗುಡೇಕೋಟೆ ಸಿದ್ಧಮೂರ್ತಿ ತಂಡದ ಹಲಗೆವಾದನ, ಕುದುರೆಡವು ರಾಜಣ್ಣ ಮತ್ತು ಮಾರಬನಹಳ್ಳಿ ಮಾರಪ್ಪರಿಂದ ಉರಿಮೆವಾದನ, ಹರಪನಹಳ್ಳಿ ಮೂರ್ತಿ ಮತ್ತು ಕೂಡ್ಲಿಗಿ ಭಿಕ್ಷಾವತಿ ತಂಡದಿಂದ ಹಗಲುವೇಷಗಾರರ ಕುಣಿತ, ಬೆಳ್ಳಕಟ್ಟೆ ಸಿದ್ದಪ್ಪ ತಂಡದ ಕಹಳೆ, ಸಿಡೇಗಲ್ಲು ಹೊನ್ನೂರಸ್ವಾಮಿ ತಂಡದಿಂದ ಚೌಡಿಕೆ ವಾದನ, ಶ್ರೀಧರ್ ಆಚಾರ್ ಅವರ ತಂಡದ ರಾಮಡೊಳ್ಳು, ಗೊಂಬೆ ಕುಳಿತ, ತಾಲೂಕಿನ ೬ ಕೋಲಾಟ ತಂಡದಿಂದ ಗ್ರಾಮೀಣ ಭಾಗದ ಪ್ರಮುಖ ಕೋಲಾಟ ನೃತ್ಯವು ಜಾನಪದ ಕಲೆಗಳು ಶೋಭಾಯಾತ್ರೆಗೆ ಮೆರುಗು ತಂದವು.
ಗ್ರಾಮದ 25ಕ್ಕೂ ಹೆಚ್ಚು ರೈತರು ತಮ್ಮ ಎತ್ತಿನಗಾಡಿಗೆ ಸಿಂಗಾರ ಮಾಡಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನೂರಾರು ಮಹಿಳೆಯರು ಭಾವೈಕ್ಯದೊಂದಿಗೆ ಪೂರ್ಣಕುಂಭ ಹೊತ್ತು ಸಾಗಿದರು.ಜಾನಪದ ಕಲಾ ಮೆರವಣಿಗೆಗೆ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಸಹಾಯಕ ಆಯುಕ್ತರಾದ ನೋಂಗ್ಜಾಯ್ ಮೊಹಮದ್ ಅಲಿ ಆಕ್ರಮ್ ಶಾ ಹಾಗೂ ಸ್ಥಳೀಯ ಮುಖಂಡರು ಹೆಜ್ಜೆ ಹಾಕಿದರು.