ಸಾರಾಂಶ
ಕುಂದಗೋಳ:
ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಜಾಗೆಯಲ್ಲಿ ರಾತ್ರೋರಾತ್ರಿ ಪರವಾನಗಿ ಇಲ್ಲದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದರಿಂದ ಕೆಲಕಾಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಹಸೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಆಗಿರುವುದೇನು?:
ಗುಡೇನಕಟ್ಟಿ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿ ಸರ್ಕಾರಿ ಗಾಂವ್‌ಠಾಣಾ ಇದೆ. ಆ ಜಾಗೆಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೆಲವರು ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಿದ್ದಾರೆ. ಗ್ರಾಮಸ್ಥರು ಬೆಳಿಗ್ಗೆ ನೋಡಿದಾಗಲೇ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಗೊತ್ತಾಗಿದೆ. ಕೆಲವರು ಈ ರೀತಿ ಮೂರ್ತಿ ಮಾಡುವುದು ಸರಿಯಲ್ಲ ಎಂದು ವಾದಿಸಿದರೆ, ಕೆಲವರು ಮಾಡಿದರೆ ತಪ್ಪೇನು ಎಂದು ವಾದಿಸಿದ್ದುಂಟು. ಕೊನೆಗೆ ರಾಯಣ್ಣನ ಅಭಿಮಾನಿಗಳು ಮೂರ್ತಿಗೆ ಹೂ ಮಾಲೆ ಹಾಕಿ ರಾಯಣ್ಣನಿಗೆ ಜೈ ಎಂದು ಜಯಕಾರ್ ಕೂಗಿದರು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ರಾಜು ಮಾವರಕರ್, ತಾಪಂ ಇಒ ಜಗದೀಶ ಕಮ್ಮಾರ, ಪ್ರತಿಷ್ಠಾಪನೆ ಜಾಗೆ ಪರಿಶೀಲಿಸಿದರು. ನಂತರ ಗ್ರಾಮಸ್ಥರ ಸಭೆ ನಡೆಸಿದರು. ಈ ವೇಳೆ ಇದು ಗಾಂವಠಾಣಾ ಜಾಗೆ. ಇಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದರೆ ಕೆಲವೊಂದಿಷ್ಟು ಸರ್ಕಾರಿ ನಿಯಮಗಳಿರುತ್ತವೆ. ಆದರೆ ಪ್ರತಿಷ್ಠಾಪನೆ ಮಾಡಿದವರಿಗೆ ಇದು ಗೊತ್ತಿಲ್ಲ. ಗ್ರಾಮದಲ್ಲಿ ಹಬ್ಬವಿದೆ. ಹೀಗಾಗಿ ಸದ್ಯ ಯಾವುದೇ ಚಟುವಟಿಕೆ ನಡೆಸುವುದು ಬೇಡ. ಹಬ್ಬ ಮುಗಿದ ಬಳಿಕ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಲಾಗುವುದು. ಅಲ್ಲಿಂದ ನಿರ್ದೇಶನ ಬಂದಂತೆ ಕ್ರಮಕೈಗೊಳ್ಳಲಾಗುವುದು. ಮೂರ್ತಿ ಬಳಿ ಯಾರೂ, ಯಾವುದೇ ಬಗೆಯ ಚಟುವಟಿಕೆ ನಡೆಸಬೇಡಿ ಎಂದು ಮನವಿ ಮಾಡಿದರು.
ಮುಂದೆ ಮೂರ್ತಿ ಪ್ರತಿಷ್ಠಾಪನೆಗೆ ಯಾವ ರೀತಿ ಪರವಾನಗಿ ತೆಗೆದುಕೊಳ್ಳಬೇಕೋ ಅದನ್ನು ಪಡೆದುಕೊಂಡು ಮೂರ್ತಿ ಪ್ರತಿಷ್ಠಾಪನೆ ಮಾಡೋಣ ಎಂದ ಅವರು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುವುದು ಎಂದು ತಿಳಿಸಿದರು.ಕುರುಬ ಸಾಮಾಜದ ಮುಖಂಡ ಅಡಿವೆಪ್ಪ ಶಿವಳ್ಳಿ ಮಾತನಾಡಿ. ಗ್ರಾಮದ ಎಲ್ಲರೂ ಒಂದೇ ಮನೆತನದ ಅಣ್ಣ ತಮ್ಮರಂತೆ ಇದ್ದೇವೆ. ಇದಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಎಲ್ಲ ಜನಾಂಗದವರು ಸಮಾನರಾಗಿ ನಡೆದುಕೊಂಡು ಬಂದಿದ್ದೇವೆ. ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.ಕಾಂಗ್ರೆಸ್ ಮುಖಂಡ ಶಿವಾನಂದ ಮುತ್ತಣ್ಣವರ ಮಾತನಾಡಿ. 7 ವರ್ಷದ ಹಿಂದೆಯೇ ಗ್ರಾಪಂನಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಠರಾವು ಪಾಸ್ ಮಾಡಲಾಗಿದೆ ಎಂಬ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಯಾವುದೇ ತೊಂದರೆಗೆ ದಾರಿ ಮಾಡಿಕೊಡದಂತೆ ಕೆಲಸ ನಿರ್ವಹಿಸುತ್ತೇವೆ ಎಂದರು ಈ ವೇಳೆ ಸಿಪಿಐ ಜಗದೀಶ ಅಂಬಿಗೇರ, ಲಕ್ಷಣ ಚುಳುಕಿ, ಕಲ್ಲಪ್ಪ ಹರಕುಣಿ, ಸುರೇಶ ಗೋಕಾಕ, ಮಂಜುನಾಥ ಕರಿಗಾರ, ಮುರಡೇಶ ಬ್ಯಾಹಟ್ಟಿ, ಶ್ರೀಕಾಂತ ನಾಗರಳ್ಳಿ, ನಿಂಗಪ್ಪ ಕಳಸಣ್ಣವರ, ಮುಕಪ್ಪ ಕುಸುಗಲ್, ಬಸವರಾಜ ಸೊಟದಮ್ಮನವರ, ಬಸ್ಸು ಕಟ್ಟಿಗಾರ ಸೇರಿದಂತೆ ಅನೇಕರಿದ್ದರು.