ಗುಡಿ ಗುಂಡಾರ ನಿರ್ಮಾಣಕ್ಕೆ ಸೀಮಿತವಾಗಬೇಡಿ: ಜೆ.ಟಿ. ಪಾಟೀಲ

| Published : Jan 29 2024, 01:32 AM IST

ಸಾರಾಂಶ

ಕೆರೂರ: ರಡ್ಡಿ ಸಮಾಜ ಗುಡಿ ಗುಂಡಾರ ನಿರ್ಮಾಣಕ್ಕೆ ಸೀಮಿತವಾಗಬಾರದು. ಜೀವಂತ ಗುಡಿಗಳೆಂದರೆ ಶಿಕ್ಷಣ ಸಂಸ್ಥೆಗಳು. ಈಗಿನ ಅಧುನಿಕ ಯುಗದಲ್ಲಿ ಇತರ ದೇಶಗಳೊಂದಿಗೆ ಪೈಪೋಟಿ ಮಾಡುವ ಶಕ್ತಿಯನ್ನು ಶಿಕ್ಷಣದ ಮೂಲಕ ಒದಗಿಸಬೇಕಾಗಿದೆಯೆಂದು ಬೀಳಗಿ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು. ಬಾದಾಮಿ ತಾಲೂಕಿನ ಬೀಳಗಿ ಕ್ಷೇತ್ರದ ಕಗಲಗೊಂಬ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಕಗಲಗೊಂಬ ಮತ್ತು ಹೇಮ ವೇಮ ಚಾರಿಟಬಲ್‌ ಸಂಸ್ಥೆ ಬಾದಾಮಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜರುಗಿದ ಬಾದಾಮಿ ತಾಲೂಕು ಮಟ್ಟದ ಮಹಾಯೋಗಿ ಶ್ರೀ ವೇಮನರ 612ನೇ ಜಯಂತಿ ಹಾಗೂ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಕೆರೂರ

ರಡ್ಡಿ ಸಮಾಜ ಗುಡಿ ಗುಂಡಾರ ನಿರ್ಮಾಣಕ್ಕೆ ಸೀಮಿತವಾಗಬಾರದು. ಜೀವಂತ ಗುಡಿಗಳೆಂದರೆ ಶಿಕ್ಷಣ ಸಂಸ್ಥೆಗಳು. ಈಗಿನ ಅಧುನಿಕ ಯುಗದಲ್ಲಿ ಇತರ ದೇಶಗಳೊಂದಿಗೆ ಪೈಪೋಟಿ ಮಾಡುವ ಶಕ್ತಿಯನ್ನು ಶಿಕ್ಷಣದ ಮೂಲಕ ಒದಗಿಸಬೇಕಾಗಿದೆಯೆಂದು ಬೀಳಗಿ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು.

ಬಾದಾಮಿ ತಾಲೂಕಿನ ಬೀಳಗಿ ಕ್ಷೇತ್ರದ ಕಗಲಗೊಂಬ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಕಗಲಗೊಂಬ ಮತ್ತು ಹೇಮ ವೇಮ ಚಾರಿಟಬಲ್‌ ಸಂಸ್ಥೆ ಬಾದಾಮಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜರುಗಿದ ಬಾದಾಮಿ ತಾಲೂಕು ಮಟ್ಟದ ಮಹಾಯೋಗಿ ಶ್ರೀ ವೇಮನರ 612ನೇ ಜಯಂತಿ ಹಾಗೂ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದರು.

ಉತ್ತಮ ಸಂಸ್ಕಾರ, ನಡೆ-ನುಡಿ ಕಲಿಸುವುದರ ಜೊತೆಗೆ ಎಲ್ಲ ಜನಾಂಗದ ಜೊತೆ ಉತ್ತಮ ಬಾಂಧವ್ಯ, ಸಹಬಾಳ್ವೆ ನಡೆಸುತ್ತಿರುವ ರಡ್ಡಿ ಸಮಾಜದ ಪರಂಪರೆಯನ್ನು ಯುವ ಪೀಳಿಗೆಗೆ ತಿಳಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದ ಅವರು, ಮಹಾಯೋಗಿ ವೇಮನರು ಮತ್ತು ಹೇಮರಡ್ಡಿ ಮಲ್ಲಮ್ಮರ ಸಂದೇಶ ಮನುಕುಲಕ್ಕೆ ದಾರಿ ದೀಪವಾಗಿವೆ. ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಕಟ್ಟಡಕ್ಕೆ ಸಚಿವ ರಾಮಲಿಂಗಾರಡ್ಡಿ ₹10 ಲಕ್ಷ ಕೊಡಲು ಒಪ್ಪಿದ್ದು, ನನ್ನ ಅನುದಾನದಲ್ಲಿ ₹ 10 ಲಕ್ಷ ಕೊಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ ಮಾತನಾಡಿ, ಕಗಲಗೊಂಬಕ್ಕೂ ನನಗೂ ಅವಿನಾಭಾವ ಸಂಭಂದವಿದೆ. ನಾನು ಶಾಸಕನಿದ್ದಾಗ ಇದು ನನ್ನ ಕ್ಷೇತ್ರದ ಗ್ರಾಮವಾಗಿತ್ತೆಂದು ನೆನಪಿಸಿಕೊಂಡ ಅವರು, ಇಲ್ಲಿ ಏನೇ ಕಾರ್ಯಕ್ರಮವಿರಲಿ ಇಲ್ಲಿಯ ಜನರು ನನ್ನನ್ನು ಕರೆದು ಗೌರವಿಸುತ್ತಾರೆ ಈಗ ನಿರ್ಮಾಣವಾಗಲಿರುವ ಹೇಮರಡ್ಡಿ ಮಲ್ಲಮ್ಮನ ಗುಡಿಗೆ ನನ್ನ ಸಹಾಯ ಸಹಕಾರ ಇದೆ ಎಂದರು.

ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಎಚ್‌.ವೈ.ಮೇಟಿ ಮಾತನಾಡಿ, ಇತರ ಸಮಾಜಗಳನ್ನು ಗೌರವದಿಂದ ಕಾಣುವ ರಡ್ಡಿ ಸಮಾಜದ ಹಿರಿಮೆ. ಹೇಮರಡ್ಡಿ ಮಲ್ಲಮ್ಮಳ ದೇವಸ್ಥಾನಕ್ಕೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

ಡಾ.ಹನುಮಂತ ಮಳಲಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಶಶಿಕಲಾ ಯಡಹಳ್ಳಿ ಪ್ರಾಸ್ತವಿಕ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ವೇಮನಾನಂದ ಶ್ರೀಗಳು, ಸ್ವರೂಪಾನಂದ ಶ್ರೀಗಳು, ಜಗನ್ನಾಥ ಶ್ರೀಗಳು ವೇಮನರ ವಚನದ ಸಾರ ಹೇಮರಡ್ಡಿ ಮಲ್ಲಮ್ಮರ ಆದರ್ಶ ವಿವರಿಸಿದರು.

ಇದಕ್ಕೂ ಮುನ್ನ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಭಾವಚಿತ್ರಗಳ ಭವ್ಯ ಮೆರವಣಿಗೆ ಕುಂಭಮೇಳ ಸಕಲ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ವೇದಿಕೆಯಲ್ಲಿ ಸುಭಾಸ ಮೆಳ್ಳಿ, ಡಿ.ಎಂ.ಪೈಲ್‌, ಡಿ.ಪಿ. ಅಮಲಝರಿ, ರಾಮಚಂದ್ರ ಯಡಹಳ್ಳಿ, ಬಿ.ಟಿ.ಬೆನಕಟ್ಟಿ, ಸವಿತಾ ದಂಡಣ್ಣವರ, ವಿರುಪಾಕ್ಷ ಹಾದಿಮನಿ, ವೆಂಕಟೇಶ ಧರೆಣ್ಣವರ, ಹನುಮಂತ ನಾಗನೂರ ಇತರರು ಇದ್ದರು.