ಅದ್ಧೂರಿಯಾಗಿ ಚನ್ನಪಟ್ಟಣದಲ್ಲಿ ನಡೆದ ಗುಡಿಸರಗೂರು ಬಸವೇಶ್ವರಸ್ವಾಮಿ ಕೊಂಡೋತ್ಸವ

| Published : Feb 28 2024, 02:36 AM IST

ಅದ್ಧೂರಿಯಾಗಿ ಚನ್ನಪಟ್ಟಣದಲ್ಲಿ ನಡೆದ ಗುಡಿಸರಗೂರು ಬಸವೇಶ್ವರಸ್ವಾಮಿ ಕೊಂಡೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ ತಾಲೂಕಿನ ಇತಿಹಾಸ ಪ್ರಸಿದ್ಧ ಗುಡಿಸರಗೂರು ಬಸವೇಶ್ವರ ಸ್ವಾಮಿ ಕೊಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೊಂಡ ಪ್ರವೇಶಿಸಿದ ಕಳಶ ಹೊತ್ತ ಅರ್ಚಕರು । ಭಕ್ತರ ಜಯಘೋಷ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ತಾಲೂಕಿನ ಇತಿಹಾಸ ಪ್ರಸಿದ್ಧ ಗುಡಿಸರಗೂರು ಬಸವೇಶ್ವರ ಸ್ವಾಮಿ ಕೊಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಂಗಳವಾರ ಬೆಳಗಿನ ಜಾವ ಕಳಶ ಹೊತ್ತ ಅರ್ಚಕರು ಕೊಂಡ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು.

ಗುಡಿಸರಗೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಪೂಜಾಕಾರ್ಯಗಳು ನಡೆದಿದ್ದವು. ಕೊಂಡಾಬಂಡಿ, ಮುಂಗೊಂಡ ಪೂಜಾಕಾರ್ಯ ಆರಂಭವಾಗಿದ್ದವು. ಸೋಮವಾರ ಸಂಜೆಯೇ ವಿವಿಧ ಗ್ರಾಮಗಳ ಭಕ್ತರು ಕೊಂಡಕ್ಕೆ ಸೌದೆ ತಂದು ಹಾಕುವ ಕೆಲಸ ಮಾಡಿದ್ದರು. ರಾತ್ರಿ ಪೂರ್ತಿ ಸೌದೆ ಉರಿಸಿ ಕೆಂಡವಾಗಿಸಿ, ಕೆಂಡ ತುಂಬಿದ ಕೊಂಡದ ಗುಂಡಿ ಸುತ್ತ ಬಸವನ ಪ್ರದಕ್ಷಿಣೆ ಮಾಡಿದ ನಂತರ ದೇಗುಲದ ಪೂಜಾರಿ ಕಳಶ ಹೊತ್ತು ಬರಿಗಾಲಿನಲ್ಲಿ ಕೊಂಡ ಹಾಯುವುದು ಇಲ್ಲಿಯ ಪದ್ಧತಿ.

ಬಸವೇಶ್ವರ ಸ್ವಾಮಿಯ ಬಳಿ ಭಕ್ತಾದಿಗಳು ತಮ್ಮ ರಾಸುಗಳ ಒಳಿತಿಗಾಗಿ ಹರಕೆ ಹೊರುವುದು, ತಮ್ಮ ರಾಸುಗಳಿಗೆ ಕೆಡಕುಂಟಾದಾಗ ಬಸವೇಶ್ವರನ ನೆನೆದು ಕೊಂಡಕ್ಕೆ ಸೌದೆ ಹಾಕುತ್ತೇನೆಂದು ಹರಕೆ ಹೊರುವುದು ರಾಸುಗಳು ಗುಣಮುಖವಾದಾಗ ಹಬ್ಬದಂದು ಹರಕೆ ಹೊತ್ತಂತೆ ಕೊಂಡಕ್ಕೆ ಹರಳು ಹಾಕುವುದು, ಸೌದೆ ಹಾಕುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚನ್ನಪಟ್ಟಣ ತಾಲೂಕಿನ ಗುಡಿಸರಗೂರು ಬಸವೇಶ್ವರ ಸ್ವಾಮಿ ಕೊಂಡಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.