ಸಾರಾಂಶ
ಹಾವೇರಿ: ಜಿಲ್ಲೆಯ ಹೊಸರಿತ್ತಿ ಗ್ರಾಮದ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅಧ್ಯಯನ ಪೀಠ ಸ್ಥಾಪಿಸಲು ಹಾವೇರಿ ವಿಶ್ವವಿದ್ಯಾಲಯ ಸಿದ್ಧ ಎಂದು ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದರು.ತಾಲೂಕಿನ ಹೊಸರಿತ್ತಿ ಗ್ರಾಮೀಣ ಗುರುಕುಲದಲ್ಲಿ ಶುಕ್ರವಾರ ಆಯೋಜಿಸಿದ್ದ ಗುದ್ಲೆಪ್ಪ ಹಳ್ಳಿಕೇರಿ ಅವರ 120ನೇ ಜಯಂತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಗಾಂಧಿ ಗ್ರಾಮೀಣ ಗುರುಕುಲದಿಂದ ಈ ಸಂಬಂಧ ಸೂಕ್ತ ಪ್ರಸ್ತಾವನೆ ನೀಡಬೇಕು. ಈ ವಿಶಿಷ್ಟ ಗುರುಕುಲದಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅವರ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕು. ಈ ಮೂಲಕ ಇಡೀ ದೇಶ ಮತ್ತು ವಿಶ್ವಕ್ಕೆ ಈ ಮಹಾನ್ ಚೇತನದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು. ಇವರ ಬಗ್ಗೆ ಇನ್ನೂ ಹೆಚ್ಚಿನ ಪ್ರಮಾಣದ ಪ್ರಚಾರವನ್ನು ನಾವೆಲ್ಲ ನೀಡಬೇಕು. ಅದಕ್ಕಾಗಿ ಗುದ್ಲೆಪ್ಪ ಹಳ್ಳಿಕೇರಿ ಹೆಸರಿನಲ್ಲಿ ಪ್ರತ್ಯೇಕ ಮತ್ತು ಸಮಗ್ರ ಅಧ್ಯಯನ ಪೀಠವೊಂದು ರೂಪುಗೊಳ್ಳಬೇಕು. ಹೊಸರಿತ್ತಿಯ ಅವರ ಕಾರ್ಯಕ್ಷೇತ್ರದಲ್ಲಿ, ಈ ಗಾಂಧಿ ಗುರುಕುಲದಲ್ಲೇ ಈ ಪೀಠ ತಲೆ ಎತ್ತಬೇಕು ಎಂಬುದು ನನ್ನ ಅನಿಸಿಕೆ ಎಂದರು. ಗುದ್ಲೆಪ್ಪ ಹಳ್ಳಿಕೇರಿ ಪ್ರತಿಷ್ಠಾನದ ಗುದ್ಲೆಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಮೋಹನ ಹೆಗಡೆ, ಗಾಂಧಿವಾದಿ ಮತ್ತು ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಗುದ್ಲೆಪ್ಪ ಹಳ್ಳಿಕೇರಿ ಅವರಂಥ ಸಮಾಜಮುಖಿ ಸುಧಾರಕರು ಇಂದಿನ ದಿನಗಳಲ್ಲಿ ಸಿಗುವುದು ಅತ್ಯಂತ ಕಷ್ಟ. ಗುದ್ಲೆಪ್ಪ ಹಳ್ಳಿಕೇರಿಯವರು ನಿಸ್ಪೃಹರಾಗಿ ಸಮಾಜಕ್ಕೆ ಕೊಟ್ಟಿದ್ದು ಲೆಕ್ಕವಿಲ್ಲದಷ್ಟು. ಸಮಾಜದಿಂದ ಏನನ್ನೂ ನಿರೀಕ್ಷಿಸದೇ ದೇಶದ ಸ್ವಾತಂತ್ರ್ಯ, ಸ್ವರಾಜ್ಯದಲ್ಲಿ ಭಾಗವಹಿಸಿದ್ದರು. ಗ್ರಾಮೀಣ ಬದುಕಿನ ಮಹತ್ವ ಮತ್ತು ಭಾವಿ ಪ್ರಜೆಗಳಾದ ಮಕ್ಕಳ ಶಿಕ್ಷಣ ಹೇಗಿರಬೇಕು ಎಂಬುದರ ಚಿಂತನೆಗಳನ್ನು ತಳಮಟ್ಟಕ್ಕೆ ಪಸರಿಸಿದವರು ಗುದ್ಲೆಪ್ಪ. ಗಾಂಧಿ ಕನಸಿನ ಭಾರತವನ್ನು ಸಾಕಾರಗೊಳಿಸುವಲ್ಲಿ ಹೊಸರಿತ್ತಿಯನ್ನು ಪ್ರಯೋಗ ಶಾಲೆ ಮಾಡಿಕೊಂಡು ದೇಶವ್ಯಾಪಿ ಗಮನ ಸೆಳೆದರು. ಇಂತಹ ಸಮಾಜ ಸುಧಾರಕರು ಕಡಿಮೆಯಾಗಿ ಮೌಲ್ಯಗಳು ನಶಿಸುತ್ತಿರುವುದು ನೋವಿನ ಸಂಗತಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗುದ್ಲೆಪ್ಪ ಹಳ್ಳಿಕೇರಿ ಅಧ್ಯಯನ ಪೀಠ ನೀಡುವುದಾಗಿ ಹೇಳಿದ ಕುಲಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಮತ್ತು ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಧರ್ಮದರ್ಶಿ ವೀರಣ್ಣ ಚೆಕ್ಕಿ, ಗುದ್ಲೆಪ್ಪ ಹಳ್ಳಿಕೇರಿಯವರ ಮೊಮ್ಮಗ ಡಾ. ಗುದ್ಲೇಶ್ ದೀನಬಂಧು ಹಳ್ಳಿಕೇರಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))