ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಅತಿಥಿ ಉಪನ್ಯಾಸಕರು ಹಾಸಿಗೆ, ದಿಂಬು ಸಮೇತ ಆಗಮಿಸಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ಕರೆ ನೀಡಿದರು.
ಕೊಪ್ಪಳ: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಅತಿಥಿ ಉಪನ್ಯಾಸಕರು ಹಾಸಿಗೆ, ದಿಂಬು ಸಮೇತ ಆಗಮಿಸಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಬೆಳಗಾವಿ ಅಧಿವೇಶನದ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಸರ್ಕಾರ ಅತಿಥಿ ಉಪನ್ಯಾಸಕರು ಹಾಗೂ ಶೈಕ್ಷಣಿಕ ಸಂಯೋಜಕರು ಎಂದು ಪ್ರತ್ಯೇಕಿಸಿ ವಿಭಜನೆ ಮಾಡಿದೆ. ಆದರೆ ನಾವೆಲ್ಲರೂ ಒಂದೇ. ಶೈಕ್ಷಣಿಕ ಸಂಯೋಜಕರ ಹುದ್ದೆಗಳನ್ನು ಮೂರು ವರ್ಷದ ಬದಲಾಗಿ ಕಾಯಂಗೊಳಿಸಬೇಕು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸೇವಾ ಭದ್ರತೆ ಒದಗಿಸಬೇಕು. 2009ರ ಎಂಫಿಲ್ ಪದವಿಯನ್ನು ಪರಿಗಣಿಸಬೇಕು. ಸೇವಾ ನಿವೃತ್ತಿ ನಂತರ ನೀಡುವ ₹5 ಲಕ್ಷ ಇಡುಗಂಟನ್ನು ₹50 ಲಕ್ಷಕ್ಕೆ ಹೆಚ್ಚಿಸಬೇಕು. ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ ಎಂದರು.ರಾಜ್ಯದ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಶೈಕ್ಷಣಿಕ ಸಂಯೋಜಕರು ಹೋರಾಟಕ್ಕೆ ಸಜ್ಜಾಗಬೇಕು. ಈ ಬಾರಿ ಸಾಂಕೇತಿಕ ಪ್ರತಿಭಟನೆಗೆ ಸೀಮಿತವಾಗದೆ ಬೇಡಿಕೆ ಈಡೇರುವ ವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಹೋರಾಟವೇ ಅಂತಿಮ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಈ ಬಾರಿಯ ಬೆಳಗಾವಿ ಅಧಿವೇಶನದ ಹೋರಾಟ ಅಂತಿಮ ಹೋರಾಟವಾಗಲಿದೆ. ಸೇವಾ ಭದ್ರತೆ ಸಿಗುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಡಾ. ಹನುಮಂತಗೌಡ ಕಲ್ಮನಿ ತಿಳಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ವೀರಣ್ಣ ಸಜ್ಜನರ ಅಧ್ಯಕ್ಷತೆ ವಹಿಸಿದ್ದರು. ಡಾ. ಸಣ್ಣ ದೇವೇಂದ್ರ ಸ್ವಾಮಿ, ಡಾ. ತುಕಾರಾಂ ನಾಯ್ಕ, ವಿಜಯಕುಮಾರ್ ಕುಲಕರ್ಣಿ, ವಾಸುದೇವ ಬುರ್ಲಿ, ಬಸವರಾಜ ಸಸಿಮಠ, ಗೀತಾ ಬನ್ನಿಕೊಪ್ಪ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಉಪಸ್ಥಿತರಿದ್ದರು. ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.