ಅತಿಥಿ ಉಪನ್ಯಾಸಕರ ಮುಷ್ಕರ: ವಿದ್ಯಾರ್ಥಿಗಳಿಗೆ ಪರೀಕ್ಷೆ ಚಿಂತೆ

| Published : Dec 21 2023, 01:15 AM IST

ಅತಿಥಿ ಉಪನ್ಯಾಸಕರ ಮುಷ್ಕರ: ವಿದ್ಯಾರ್ಥಿಗಳಿಗೆ ಪರೀಕ್ಷೆ ಚಿಂತೆ
Share this Article
  • FB
  • TW
  • Linkdin
  • Email

ಸಾರಾಂಶ

ಸೇವೆ ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ತರಗತಿ ಬಹಿಷ್ಕರಿಸಿ ಕಳೆದ 28 ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರಣ ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸರಿಯಾಗಿ ಪಾಠಪ್ರವಚನಗಳು ನಡೆಯುತ್ತಿಲ್ಲ. ಹೀಗಾಗಿ ಪರೀಕ್ಷೆ ಬರೆಯೋದು ಹೇಗೆ ಅನ್ನೋ ಚಿಂತೆ ವಿದ್ಯಾರ್ಥಿಗಳಲ್ಲಿ ಆವರಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಸೇವೆ ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ತರಗತಿ ಬಹಿಷ್ಕರಿಸಿ ಕಳೆದ 28 ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರಣ ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸರಿಯಾಗಿ ಪಾಠಪ್ರವಚನಗಳು ನಡೆಯುತ್ತಿಲ್ಲ. ಹೀಗಾಗಿ ಪರೀಕ್ಷೆ ಬರೆಯೋದು ಹೇಗೆ ಅನ್ನೋ ಚಿಂತೆ ವಿದ್ಯಾರ್ಥಿಗಳಲ್ಲಿ ಆವರಿಸಿದೆ.

ಇದೊಂದು ತರ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೆ ಸರ್ಕಾರ ಮತ್ತು ಉಪನ್ಯಾಸಕರ ಮಧ್ಯೆ ಜಗಳದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ವಿದ್ಯಾರ್ಥಿಗಳು ತರಗತಿಗಳಿಲ್ಲದೆ ಕಾಲೇಜು ಕಾಂಪೌಂಡ್‌ನೊಳಗೆ ಅಲ್ಲಲ್ಲಿ ಕುಳಿತು ಕಾಲ ದೂಡುತಿದ್ದಾರೆ.

ಶೇ.50ರಷ್ಟೂ ಪಾಠವಾಗಿಲ್ಲ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾಯಂ ಬೋಧಕರ ಸಂಖ್ಯೆ ಕಡಿಮೆಯಿರುವ ಕಾರಣ ಕಾಲೇಜು ಶಿಕ್ಷಣ ಇಲಾಖೆ ಕಳೆದ ಎರಡು ದಶಕಗಳಿಂದ ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಂಡಿದೆ. ಅತಿಥಿ ಉಪನ್ಯಾಸಕರು ಸೇವಾ ಸಕ್ರಮಾತಿಗೆ ಆಗ್ರಹಿಸಿ ಕಳೆದ ನವೆಂಬರ್‌ 23 ರಿಂದ ಮುಷ್ಕರ ಹೂಡಿದ ಪರಿಣಾಮ ವಿದ್ಯಾರ್ಥಿಗಳ ಪಾಠಕ್ಕೆ ತೀವ್ರ ಹಿನ್ನಡೆಯಾಗಿದೆ. ಜನವರಿ ಅಂತ್ಯಕ್ಕೆ ಪರೀಕ್ಷೆಗಳು ನಡೆಯುವ ಸಂಭವವಿದ್ದರೂ ಈವರೆಗೆ ಶೇ.50ರಷ್ಟು ಪಾಠಗಳೂ ಮುಗಿದಿಲ್ಲ.ಈ ಆತಂಕ ವಿದ್ಯಾರ್ಥಿಗಳಷ್ಟೇ ಅಲ್ಲದೆ ಪೋಷಕರನ್ನು ಸಹ ಕಾಡುವಂತೆ ಮಾಡಿದೆ.

ಅತಿಥಿ ಉಪನ್ಯಾಸಕರ ಮುಷ್ಕರದ ಹಿನ್ನೆಲೆಯಲ್ಲಿ ವೇಳಾಪಟ್ಟಿಯಂತೆ ತರಗತಿಗಳು ನಡೆಯದ ಕಾರಣ ಕಾಯಂ ಉಪನ್ಯಾಸಕರ ಮೇಲೆ ವಿಪರೀತ ಹೊರೆ ಬೀಳುವಂತಾಗಿದೆ. ಈ ವರ್ಷದ ರಜೆಗಳನ್ನು ಡಿಸೆಂಬರ್‌ನಲ್ಲಿ ಹಾಕಿಕೊಂಡು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು ಎಂಬ ಎಣಿಕೆಯಲ್ಲಿದ್ದ ಕಾಯಂ ಪ್ರಾಧ್ಯಾಪಕರಿಗೆ ಮುಷ್ಕರ ಹೊರೆಯಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಅತಿಥಿ ಶಿಕ್ಷಕರು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ 300ರಕ್ಕೂ ಹೆಚ್ಚು ಜನ ಅಥಿತಿ ಉಪನ್ಯಾಸಕರು ಮುಷ್ಕರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಒಂದರಲ್ಲೆ ಸರ್ಕಾರಿ ಮಹಿಳಾ ಕಾಲೇಜು ಹಾಗು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳೆರಡರಲ್ಲೆ ಸುಮಾರು ನೂರು ಜನ ಅತಿಥಿ ಉಪನ್ಯಾಸಕರು ಕೆಲಸ ಮಾಡುತಿದ್ದು, ಅವರಿಲ್ಲದೆ ಪಾಠಪ್ರವಚನಗಳು ನಡೆಯದೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ.

ಈನಡುವೆ ನಡೆಯುವ ಒಂದೋ ಎರಡೋ ತರಗತಿಗಳನ್ನು ಮುಗಿಸಿಕೊಳ್ಳುವ ವಿದ್ಯಾರ್ಥಿಗಳು ಇದೇ ಅವಕಾಶ ಬಳಸಿಕೊಂಡು ಸಿನಿಮಾ, ಪಾರ್ಕು, ಹೋಟಲ್, ಪಿಕ್ ನಿಕ್, ಪ್ರವಾಸ ಕೈಗೊಳ್ಳುತ್ತಿದ್ದಾರೆ. ಬಹುಸಂಖ್ಯಾತ ಮಂದಿ ತಮ್ಮ ಮೊಬೈಲ್‌ನಲ್ಲಿಯೇ ಕಾಲಕಳೆಯುವುದನ್ನು ಹೆಚ್ಚು ರೂಢಿ ಮಾಡಿಕೊಂಡಿರುವುದು ಪೋಷಕರಿಗೂ ನುಂಗಲಾಗದ ತುತ್ತಾಗಿದೆ.

8 ಮಂದಿ ಕಾಯಂ ಉಪನ್ಯಾಸಕರು

ಇನ್ನು ಕಳೆದ ಇಪ್ಪತ್ಮೂರು ದಿನಗಳಿಂದ ಮುಷ್ಕರದಲ್ಲಿ ತೊಡಗಿರುವ ಅತಿಥಿ ಉಪನ್ಯಾಸಕರ ತರಗತಿಗಳನ್ನ ಸರ್ಕಾರಿ ಉಪನ್ಯಾಸಕರಿಂದಲೆ ಮಾಡಿಸುವ ಪ್ರಯತ್ನ ಮಾಡಿದ್ದೇವೆ. ಇರುವ ಉಪನ್ಯಾಸಕರಿಗೆ ಪ್ರತಿದಿನ ಒಂದೆರಡು ಪಿರೀಯಡ್ ಗಳು ಹೆಚ್ಚಾಗಿ ತಗೊಳ್ಳುವಂತೆ ಹಂಚಿಕೊಳ್ಳಲಾಗಿದೆ. ನಾನು ಸಹ ಸೇರಿದಂತೆ 8 ಜನ ಮಾತ್ರ ಕಾಯಂ ಉಪನ್ಯಾಸಕರಿದ್ದೇವೆ. ಇಲ್ಲಿ 23 ಜನ ಅತಿಥಿ ಉಪನ್ಯಾಸಕರು ಸೇವೆಯಲ್ಲಿದ್ದಾರೆ ಎಂದು ಸರ್ಕಾರಿ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ಚಂದ್ರಯ್ಯ ಹೇಳುತ್ತಾರೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಈ ವೇಳೆಗಾಗಲೇ ಶೇ.70 ರಿಂದ 80 ರಷ್ಟು ಪಾಠಗಳು ಮುಗಿದು ಆಂತರಿಕ ಅಂಕಗಳ ಪರೀಕ್ಷೆಗಳು ಪ್ರಾರಂಭವಾಗಬೇಕಿತ್ತು. ಆದರೆ ಮುಷ್ಕರದಿಂದ ಎಲ್ಲವೂ ಅಯೋಮಯವಾಗಿದೆ. ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯಕೊಡುವಂತೆ ಪ್ರಾಂಶುಪಾಲರ ಮೂಲಕ ಜಂಟಿ ನಿರ್ಧೇಶಕರು ಸೂಚನೆ ನೀಡಿದ್ದರೂ ಜಾರಿ ಸಾಧ್ಯವಾಗಿಲ್ಲ.

ವಿದ್ಯಾರ್ಥಿಗಳ ಭವಿಷ್ಯ ಕಾಪಾಡಿ

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕು. ಮತ್ತೊಂದು ಕಡೆ ಉಪನ್ಯಾಸಕರಿಗೆ ನ್ಯಾಯ ಕೊಡುವ ದೃಷ್ಟಿಯಲ್ಲಿ ಸರ್ಕಾರವೂ ಅವರ ಸೇವೆ ಸಕ್ರಮಾತಿಗೂ ಮನಸ್ಸು ಮಾಡಬೇಕು ಎನ್ನುವುದೆ ಪೋಷಕರು ಒತ್ತಾಯಿಸಿದ್ದಾರೆ.