ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಮೂಲಕ ಅತಿಥಿ ಉಪನ್ಯಾಸಕರ ಧ್ವನಿಯಾಗಿ ನಿಲ್ಲಬೇಕು

ಕಂಪ್ಲಿ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಪರಿಷ್ಕರಣೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಮೂಲಕ ಅತಿಥಿ ಉಪನ್ಯಾಸಕರ ಧ್ವನಿಯಾಗಿ ನಿಲ್ಲಬೇಕು ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರು ಶಾಸಕ ಜೆ.ಎನ್. ಗಣೇಶಗೆ ಸೋಮವಾರ ಮನವಿ ಸಲ್ಲಿಸಿದರು.ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ನಾಗರತ್ನಾ ಮಾತನಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹಿತ ದೃಷ್ಟಿಯಿಂದ, ಉಪನ್ಯಾಸಕರ ಕೊರತೆ ಇರುವ ಕಡೆ ಸರ್ಕಾರ, ಸಕಾಲಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರಾದ ನಾವೆಲ್ಲರೂ ವಿದ್ಯಾರ್ಥಿಗಳ ದಾಖಲಾತಿ ಸೇರಿದಂತೆ ಕಾಲೇಜಿನ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಸಂಸ್ಥೆಯ ಹಿತದೃಷ್ಟಿಯಿಂದ ಉತ್ತಮ ಫಲಿತಾಂಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ. ಆದರೆ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಇಷ್ಟೆಲ್ಲ ಶ್ರಮಿಸುವ ನಮಗೆ ನೀಡುತ್ತಿರುವ ಗೌರವಧನ ಡಿ ಗ್ರೂಪ್ ನೌಕರರಿಗಿಂತ 3 ಪಟ್ಟು ಕಡಿಮೆ ಇದೆ ಎಂದರು.

ಸರ್ಕಾರ ಅತಿಥಿ ಉಪನ್ಯಾಸಕರ ಆತ್ಮಗೌರವ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಈಗಲಾದರೂ ಸರ್ಕಾರ ಗಮನ ಹರಿಸಿ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನವನ್ನು ₹14 ಸಾವಿರದಿಂದ ಕನಿಷ್ಠ ₹30 ಸಾವಿರ ನಿಗದಿಪಡಿಸಬೇಕು. ಗುಣಮಟ್ಟದ ಶಿಕ್ಷಣವನ್ನು ಖಾತ್ರಿ ಪಡಿಸಲು ಪ್ರತಿ ವರ್ಷದ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸೇವಾ ಹಿರಿತನವನ್ನು ಪರಿಗಣಿಸಿ ಕಾರ್ಯನಿರತ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶದಂತೆ ಅತಿಥಿ ಉಪನ್ಯಾಸಕರಿಗೆ ವಾರಕ್ಕೆ 10/12 ಗಂಟೆಗಳ ಕಾರ್ಯಭಾರವನ್ನು ನೀಡಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಉಪನ್ಯಾಸಕರಿಗೆ ಕಾರ್ಯಭಾರ ಕಡಿಮೆ ಇರುವ ಕಾಲೇಜಿನಿಂದ ವಾರದ 3 ದಿನ ಬೇರೊಂದು ಕಾಲೇಜಿಗೆ ನಿಯೋಜನೆ ಮಾಡಲಾಗುತ್ತದೆ. ಜೂನ್ ಆರಂಭದಲ್ಲಿ ನೇಮಕವಾಗುವ ಅತಿಥಿ ಉಪನ್ಯಾಸಕರು ಇದರಿಂದ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ. ಈ ಅವೈಜ್ಞಾನಿಕ ಪದ್ಧತಿ ಕೈ ಬಿಡಬೇಕು. ಕಾರ್ಯಭಾರ ಕಡಿಮೆ ಇರುವ ಕಾಯಂ ಉಪನ್ಯಾಸಕರನ್ನು ಮೇ ತಿಂಗಳಲ್ಲಿ ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಬಿ.ಕೆ. ಜಡೆಪ್ಪ, ನಿರಂಜನ್, ಖಾಸೀಂ, ಗಜೇಂದ್ರ, ಜಿ.ಶಿವಕುಮಾರ್ ಇದ್ದರು.