ಸಾರಾಂಶ
ದಾವಣಗೆರೆ: ಸೇವೆ ಕಾಯಂಗೆ ಒತ್ತಾಯಿಸಿ ಕಳೆದ 35 ದಿನಗಳಿಂದಲೂ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಹಂತದ ಹೋರಾಟ ನಡೆಸಿಕೊಂಡು ಬಂದ ಅತಿಥಿ ಬೋಧಕರು ಬುಧವಾರ ತಮ್ಮ ಕೈಗಳಿಗೆ ಹಗ್ಗ ಕಟ್ಟಿಕೊಂಡು ಪ್ರತಿಭಟಿಸಿದರು.
ನಗರದ ಜಿಲ್ಲಾಡಳಿತ ಭವನದ ಬಳಿ ಸಂಘದ ನೇತೃತ್ವದಲ್ಲಿ ಕಳೆದ 34 ದಿನಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿರುವ ಅತಿಥಿ ಉಪನ್ಯಾಸಕರು ಹೋರಾಟದ ಮುಂದುವರಿದ ಭಾಗವಾಗಿ ತಮ್ಮ ಕೈಗಳಿಗೆ ಹಗ್ಗಗಳನ್ನು ಕಟ್ಟಿಕೊಂಡು, ತಮಗೆ ಸೇವಾ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಕೊಸಗಿ ಶ್ಯಾಮಪ್ರಸಾದ, ರಾಜ್ಯದ ಸುಮಾರು 430ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಸಾವಿರಕ್ಕೂ ಅಧಿಕ ಅತಿಥಿ ಬೋಧಕರು ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ನಿರಂತರ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದರು.
ಸರ್ಕಾರಿ ಜೀತಕ್ಕಿಂತಲೂ ಕಡೆಯಾಗಿ ಕೆಲಸ ಮಾಡುತ್ತಿದ್ದರೂ ಅದ್ಯಾವುದರ ಪರಿವೆ ಇಲ್ಲದೇ ಸರ್ಕಾರ ಮೌನವಹಿಸಿದೆ. ಸರ್ಕಾರವು ಅತಿಥಿ ಶಿಕ್ಷಕರ ಬದುಕು, ಭವಿಷ್ಯವನ್ನೇ ಅತಂತ್ರ ಸ್ಥಿತಿಗೆ ನೂಕಿ, ಕೈಗಳನ್ನೂ ಕಟ್ಟಿ ಹಾಕಿದೆ. ಆಳಿದ ಸರ್ಕಾರಗಳು ಅತಿಥಿ ಬೋಧಕರ ವಿಚಾರದಲ್ಲಿ ಹಸಿ ಸುಳ್ಳುಗಳನ್ನು ಹೇಳುತ್ತಲೇ, ಅತಿಥಿ ಬೋಧಕರ ಕಿವಿಗೆ ಹೂವಿಟ್ಟು ಕಾಲಹರಣ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅತಿಥಿ ಬೋಧಕರ ಹೋರಾಟಕ್ಕೆ ಧ್ವನಿಗೂಡಿಸಿದ್ದ ಆಗಿನ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಈಗ ಸ್ವತಃ ಅಧಿಕಾರದಲ್ಲಿದ್ದರೂ ಶಿಕ್ಷಕರ ಸೇವೆ ಯಾಕೆ ಕಾಯಂಗೊಳಿಸುತ್ತಿಲ್ಲ. ನಮ್ಮ ಕೈಗಳಿಗೆ ಕಗ್ಗಂಟುಗಳನ್ನು ಹಾಕಿ, ಕಟ್ಟಿ ಹಾಕಿರುವ ಸರ್ಕಾರ ಕಗ್ಗಂಟು ಬಿಡಿಸಿ, ಬದುಕಿನಲ್ಲೂ ಬೆಳಕು ತರಬೇಕು. ಸಿದ್ದರಾಮಯ್ಯ ಸ್ವತಃ ಅತಿಥಿ ಬೋಧಕರನ್ನು ಮರೆತಂತಿದೆ ಎಂದು ಅವರು ಟೀಕಿಸಿದರು.
ಹೋರಾಟಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಸಂಘಟನೆಗಳು, ವಿದ್ಯಾರ್ಥಿಗಳು, ಯುವ ಜನರು ಬೆಂಬಲಿಸುತ್ತಿದ್ದಾರೆ. ಅತಿಥಿ ಬೋಧಕರನ್ನು ಅವಲಂಬಿಸಿ, ರಾಜ್ಯ ವ್ಯಾಪಿ ಲಕ್ಷಾಂತರ ಜನರು ಬಾಳು ನಡೆಸುತ್ತಿದ್ದಾರೆ. ಅತಿಥಿ ಬೋಧಕರು ಉನ್ನತ ಶಿಕ್ಷಣ ಪಡೆದವರಾಗಿದ್ದು, ಓದಿಗೆ ತಕ್ಕಂತೆ ಸರ್ಕಾರ ಮನ್ನಣೆ ನೀಡದೇ ದಿನಗೂಲಿ ಕಾರ್ಮಿಕರು, ಜೀತದಾಳುಗಳಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಿರುವುದು ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಅಖಿಲ ಭಾರತೀಯ ಯುವಜನ ಫೆಡರೇಷನ್‌ನ ಆವರಗೆರೆ ವಾಸು ಸೇರಿದಂತೆ ಅನೇಕ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸುತ್ತಿದ್ದು, ಜ.1ರಂದು ಸಂಘದ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದೇವೆ. ಕೈಗಳಿಗೆ ಹಗ್ಗ ಕಟ್ಟಿಕೊಟ್ಟರೂ ಸರ್ಕಾರದ ಸ್ಪಂದನೆ ಇಲ್ಲ. ಅತಿಥಿ ಬೋಧಕರೊಬ್ಬರು ಹಳೆ ಮೈಸೂರು ಭಾಗದಲ್ಲಿ ಮೈಮೇಲೆಲ್ಲಾ ಸೆಗಣಿ ಸುರಿದುಕೊಟ್ಟರೂ ದಪ್ಪ ಚರ್ಮದ ಸರ್ಕಾರದ ಗಮನಕ್ಕೂ ಬರುತ್ತಿಲ್ಲವೇ ಎಂದು ಶ್ಯಾಮಸುಂದರ ಕಿಡಿಕಾರಿದರು.
ಸಂಘದ ಎಸ್.ಶುಭಾ, ಎಂ.ಜಗದೀಶ, ಎಂ.ಕೆ.ಶೀತಲ್, ಸಿದ್ದೇಶ, ಕಳಕಪ್ಪ ಚೌರಿ, ಮೋಹನ, ಜಗದೀಶ, ಹನುಮಂತಪ್ಪ, ಪ್ರವೀಣ ಕುಮಾರ, ಸಂತೋಷ ಕುಮಾರ, ವೀರೇಶ, ಡಾ.ಗೋವಿಂದಪ್ಪ, ದೇವೇಂದ್ರಪ್ಪ, ರೇಖಾ, ಶುಭ, ಲಕ್ಷ್ಮಿ, ಚಂದ್ರಿಕಾ, ಪ್ರತಿಭಾ, ವೀಣಾ, ಹಸೀನಾ ಬೇಗಂ, ನರೇಂದ್ರ ರಾಥೋಡ್, ಬಿ.ಪಿ.ರವೀಂದ್ರ, ಅನಂತಾಚಾರಿ, ಡಾ.ಸಿ.ಎಚ್.ಪ್ರವೀಣಕುಮಾರ, ಆರ್.ಸಂತೋಷಕುಮಾರ, ಎಂ.ಆರ್.ರಾಘವೇಂದ್ರ, ಬಿ.ಜಿ.ಸಿದ್ದೇಶಪ್ಪ, ಎಸ್.ವೆಂಕಟೇಶ, ಇ.ಬೋರೇಶ, ಜಿ.ಬಿ.ಮಂಜುಳಾ, ಇ.ವಿ.ಮಾನಸಾ, ಎಂ.ಎಚ್.ಸ್ಮಿತಾ, ಜಿ.ಬಿ.ಅರುಣಕುಮಾರಿ, ಸಮೀನಾ ಎಂ.ರಫೀ, ಇ.ರೇಖಾ, ಟಿ.ಎಸ್.ಲಕ್ಷ್ಮೀದೇವಿ ಇತರರು ಪ್ರತಿಭಟನೆಯಲ್ಲಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))