ಅತಿಥಿ ಶಿಕ್ಷಕಿ ವೇತನ ದುರ್ಬಳಕೆ: ಬಿಇಒ ವರದಿ ಸಲ್ಲಿಸಿದರೂ ಇಲ್ಲ ಕ್ರಮ

| Published : Nov 29 2024, 01:01 AM IST

ಅತಿಥಿ ಶಿಕ್ಷಕಿ ವೇತನ ದುರ್ಬಳಕೆ: ಬಿಇಒ ವರದಿ ಸಲ್ಲಿಸಿದರೂ ಇಲ್ಲ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಬಿಇಒ ಡಿಡಿಪಿಐಗೆ ವರದಿ ಸಲ್ಲಿಸಿ ಹಲವು ದಿನಗಳಾದರೂ ಕ್ರಮವಹಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಖ್ಯಶಿಕ್ಷಕನ ಮೇಲೆ ಕ್ರಮಕ್ಕೆ ಡಿಡಿಪಿಐ ಹಿಂದೇಟು

ಕನ್ನಡಪ್ರಭ ವಾರ್ತೆ ಕನಕಗಿರಿ

ಹೆರಿಗೆಗೆ ತೆರಳಿದ್ದ ಅತಿಥಿ ಶಿಕ್ಷಕಿಯೊಬ್ಬರ ವೇತನ ಬಿಡುಗಡೆ ಮಾಡಿಸಿ, ದುರ್ಬಳಕೆ ಮಾಡಿಕೊಂಡು ಶಿಕ್ಷಣ ಇಲಾಖೆಗೆ ತಪ್ಪು ಮಾಹಿತಿ ನೀಡಿ ಬೇಜವಾಬ್ದಾರಿತನ ತೋರಿದ ತಾಲೂಕಿನ ಸಿರಿವಾರ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಶೇಖರಯ್ಯ ಕಲ್ಮಠ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಇಒ ಡಿಡಿಪಿಐಗೆ ವರದಿ ಸಲ್ಲಿಸಿ ಹಲವು ದಿನಗಳಾದರೂ ಕ್ರಮವಹಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

೨೦೨೩-೨೪ನೇ ಸಾಲಿನಲ್ಲಿ ಸಿರಿವಾರ ಗ್ರಾಮದ ಸ.ಹಿ.ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ೬ ಜನ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿತ್ತು. ನಂತರ ಕಾಯಂ ಶಿಕ್ಷಕಿಯೋರ್ವರು ನೇಮಕಗೊಂಡಿದ್ದಾರೆ. ಶಿಕ್ಷಕಿ ಶಾಲೆಗೆ ಹಾಜರಾದ ಮೇಲೆ ಮತ್ತೋರ್ವ ಶಿಕ್ಷಕರು ಎರವಲು ಸೇವೆ ಮೇಲೆ ಬಂದಿದ್ದಾರೆ. ಆಗ ಮಕ್ಕಳ ಸಂಖ್ಯೆಗನುಗುಣವಾಗಿ ಈ ಶಾಲೆಗೆ ೪ ಜನ ಅತಿಥಿ ಶಿಕ್ಷಕರು ಇರಬೇಕು. ಆದರೆ, ನಿಯಮಗಳನ್ನು ಗಾಳಿಗೆ ತೂರಿರುವ ಮುಖ್ಯ ಶಿಕ್ಷಕ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ೨೦೨೩ರ ಡಿ.೧೫ರಂದು ಶಾಲೆಗೆ ಭೇಟಿ ನೀಡಿ ಸೂಚಿಸುವವರೆಗೂ ಹೆಚ್ಚುವರಿ ಇಬ್ಬರು ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸಿಲ್ಲ.

ಅಲ್ಲದೇ, ಅತಿಥಿ ಶಿಕ್ಷಕಿಯೊಬ್ಬರೂ ಫೆ.೧೩ರಂದು ರಜೆ ಮೇಲೆ ತೆರಳಿದ್ದರೂ ಮುಖ್ಯಗುರು ಇಲಾಖೆಗೆ ತಪ್ಪು ಮಾಹಿತಿ ನೀಡಿ, ವೇತನ ಪಾವತಿ ಮಾಡಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ.

ಬಿಇಒ ಸೂಚಿಸಿದರೂ ಹೆಚ್ಚುವರಿ ಅತಿಥಿ ಶಿಕ್ಷಕರನ್ನು ಕರ್ತವ್ಯದಲ್ಲಿ ಮುಂದುವರೆಸಿರುವ ಮತ್ತು ಇಲಾಖೆಯ ಹಣ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆ ಮುಖ್ಯಶಿಕ್ಷಕನಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಪ್ರಸ್ತುತ ಕರ್ತವ್ಯದಲ್ಲಿರುವ ಪ್ರಭಾರಿ ಬಿಇಒ ಮಂಜುನಾಥ ವಸ್ತ್ರದ, ಮುಖ್ಯೋಪಾಧ್ಯಾಯರ ಸಮಜಾಯಿಷಿ ನೀಡಿರುವ ಪತ್ರ ಹಾಗೂ ಮಾಹೆವಾರು ಹಾಜರಾತಿ ವರದಿ ಆಧರಿಸಿ ಸರ್ಕಾರದ ಹಣ ದುರುಪಯೋಗ, ಇಲಾಖೆಗೆ ಸುಳ್ಳು ಮಾಹಿತಿ, ಕರ್ತವ್ಯದ ಮೇಲಿನ ನಿರ್ಲಕ್ಷತನವನ್ನು ಉಲ್ಲೇಖಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಇಲಾಖೆಯ ಉಪನಿರ್ದೇಶಕ ಬಿರಾದಾರ್‌ಗೆ ವರದಿ ಸಲ್ಲಿಸಿದ್ದಾರೆ.