ಪೋಸ್ಟಲ್ ಬ್ಯಾಲೇಟ್ ಮತದಾರರಿಗೆ ಮಾರ್ಗದರ್ಶನ : ಡಾ.ಬಿ.ಸುಶೀಲಾ

| Published : Mar 27 2024, 01:07 AM IST

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೋಸ್ಟಲ್ ಬ್ಯಾಲೇಟ್ ನೋಡಲ್ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ. ಸುಶೀಲಾ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಚುನಾವಣಾ ಆಯೋಗವು ಚುನಾವಣೆ ಕರ್ತವ್ಯದಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೋಸ್ಟಲ್ ಬ್ಯಾಲೇಟ್‌ ಮೂಲಕ ಮತದಾನದ ಸೌಲಭ್ಯ ಕಲ್ಪಿಸಿದ್ದು, ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೋಸ್ಟಲ್ ಬ್ಯಾಲೇಟ್ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಚುನಾವಣೆ ಕರ್ತವ್ಯದಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿಗದಿತ ನಮೂನೆಗಳಲ್ಲಿ ಅರ್ಜಿಸಲ್ಲಿಸಿ ಪೋಸ್ಟಲ್ ಬ್ಯಾಲೇಟ್‌ ಮತ್ತು ಇಡಿಸಿ ಪಡೆದು ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಜಿಲ್ಲಾ ಕಚೇರಿ ಹಾಗೂ ಅಧೀನ ಕಚೇರಿಗಳ ಚುನಾವಣೆ ಕರ್ತವ್ಯದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗೆ ನೋಡಲ್ ಅಧಿಕಾರಿಗಳು ಮಾಹಿತಿ ನೀಡಬೇಕು. ಅದರಂತೆ ನೋಡಲ್ ಅಧಿಕಾರಿಗಳ ಮೂಲಕ ನಡೆಯುವ ಪ್ರಕ್ರಿಯೆಗಳ ಬಗ್ಗೆ ಅವಶ್ಯಕ ಕ್ರಮ ಕೈಗೊಳ್ಳಲು ಅವರು ಸೂಚನೆ ನೀಡಿದರು.

ಚುನಾವಣೆಗೆ ಸಂಬಂಧಪಟ್ಟಂತೆ ಪ್ರತಿನಿತ್ಯ ಮಾರ್ಗಸೂಚಿಗಳ ಬಗ್ಗೆ ನಿಗಾ ಇಡಬೇಕು. ಎಲ್ಲಾ ಅಧಿಕಾರಿ, ಸಿಬ್ಬಂದಿ ತಪ್ಪದೇ ವೋಟರ್ ಹೆಲ್ಪಲೈನ್ ಆ್ಯಪ್ ಮತ್ತು ಸಿ-ವಿಜಿಲ್ ಆ್ಯಪ್ ಡೌನ್‌ಲೋಡ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಪೋಸ್ಟಲ್ ಬ್ಯಾಲೇಟ್ ಕುರಿತು ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಹಣಮಂತ ಗೋಗಲೆ ಹಾಗೂ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಅವಶ್ಯಕ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಇದ್ದರು. ಪೋಸ್ಟಲ್ ಬ್ಯಾಲೇಟ್ ನೋಡಲ್ ಅಧಿಕಾರಿ ಕೃಷಿ ಜಂಟಿ ನಿರ್ದೇಶಕಿ ಮಂಜುಳಾ ಸ್ವಾಗತಿಸಿದರು.