ಸಮಾಜ ಸುಧಾರಣೆಗೆ ಹಿರಿಯರ ಮಾರ್ಗದರ್ಶನ ಮುಖ್ಯ

| Published : Apr 10 2025, 01:01 AM IST / Updated: Apr 10 2025, 01:02 AM IST

ಸಮಾಜ ಸುಧಾರಣೆಗೆ ಹಿರಿಯರ ಮಾರ್ಗದರ್ಶನ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ಸುಧಾರಣೆಗೆ ಹಿರಿಯ ನಾಗರೀಕರ ಮಾರ್ಗದರ್ಶನ ಮುಖ್ಯವಾಗಿದೆ. ನಾನು ಸಹ ನಿವೃತ್ತ ಸರ್ಕಾರಿ ನೌಕರನ ಮಗ. ಕಷ್ಟಗಳಿಗೆ ಸದಾ ಸ್ಪಂದಿಸಿ, ನಿಮ್ಮಗಳ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವೆ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.

- ಹಿರಿಯ ನಾಗರೀಕರ ದಿನ ಸಮಾರಂಭದಲ್ಲಿ ಶಾಸಕ ಬಸವರಾಜ ಅಭಿಮತ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಸಮಾಜ ಸುಧಾರಣೆಗೆ ಹಿರಿಯ ನಾಗರೀಕರ ಮಾರ್ಗದರ್ಶನ ಮುಖ್ಯವಾಗಿದೆ. ನಾನು ಸಹ ನಿವೃತ್ತ ಸರ್ಕಾರಿ ನೌಕರನ ಮಗ. ಕಷ್ಟಗಳಿಗೆ ಸದಾ ಸ್ಪಂದಿಸಿ, ನಿಮ್ಮಗಳ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವೆ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.

ಬುಧವಾರ ಪಟ್ಟಣದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಮಹಾಸಭೆ ಹಾಗೂ ನಿವೃತ್ತ ನೌಕರರ ಮತ್ತು ಹಿರಿಯ ನಾಗರೀಕರ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿಗಳಾಗುತ್ತಾರೆ, ವಕೀಲರ ಮಕ್ಕಳು ವಕೀಲರಾಗುತ್ತಾರೆ, ವೈದ್ಯರ ಮಕ್ಕಳು ವೈದ್ಯರಾಗುತ್ತಾರೆ. ಆದರೆ ಸರ್ಕಾರಿ ನೌಕರನ ಮಕ್ಕಳು ಸರ್ಕಾರಿ ನೌಕರಿ ಪಡೆಯುವುದು ಕಷ್ಟವಾಗಿದೆ. ತಂದೆ ಗ್ರಾಮ ಸೇವಕ ವೃತ್ತಿ ಮಾಡುತ್ತಿದ್ದರು. ಆಗ ಅವರಿಗೆ ₹200 ಸಂಬಳ ಬರುತ್ತಿತ್ತು. ಆ ಸಂಬಳದಲ್ಲಿಯೇ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು. ನಮಗಾಗಿ ಆಸ್ತಿಯನ್ನು ಮಾಡದೇ, ನಮ್ಮನ್ನೆ ಸಮಾಜಕ್ಕೆ ಆಸ್ತಿಯಾಗುವಂತೆ ಬೆಳೆಸಿದ್ದಾರೆ ಎಂದರು.

ತಂದೆಯೂ ಇದೇ ತಾಲೂಕಿನವರಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಈ ನಿವೃತ್ತ ಸಂಘ ಸದಸ್ಯರನ್ನಾಗಿ ಮಾಡಿ, ಎಲ್ಲ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಂತೆ ತಿಳಿಸುತ್ತೇನೆ ಎಂದರು.

ಸಮಾರಂಭದ ಉದ್ಘಾಟನೆ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದೆ. ನಿವೃತ್ತಿ ಹೊಂದಿದ ಮೇಲೆ ನಮ್ಮ ಕೆಲಸ ಏನು ಇಲ್ಲ ಎಂದು ಭಾವಿಸಬಾರದು. ಇಂದಿನ ಯುವಪೀಳಿಗೆಗೆ ಪರಿಸರ, ಜೀವನದ ಮೌಲ್ಯಗಳನ್ನು ತಿಳಿಸುತ್ತಾ ಸಮಾಜವನ್ನು ತಿದ್ದುವಂತಹ ಕೆಲಸ ಮಾಡಬೇಕಾಗಿದೆ ಎಂದರು.

ಶಾಸಕನಾಗಿದ್ದ ಸಂದರ್ಭ ಕ್ಷೇತ್ರದ ಅಡಕೆ ಬೆಳೆಗಾರ ರೈತರಿಗೆ ಅನುಕೂಲ ಆಗುವಂತೆ ಉಬ್ರಾಣಿ ಮತ್ತು ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಕಾರ್ಯಗತಗೊಳಿಸಿದ್ದೆ. ಈ ಯೋಜನೆಯಲ್ಲಿ ಬಿಟ್ಟುಹೋದ ಕೆಲ ಕೆರೆಗಳನ್ನು ಈಗಿನ ಶಾಸಕರಾಗಿರುವ ಬಸವರಾಜ ವಿ. ಶಿವಗಂಗಾ ಸೇರ್ಪಡೆಗೊಳಿಸಿರುವುದು ಶ್ಲಾಘನೀಯ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವಜಯಚಂದ್ರ ಮಹಾಸ್ವಾಮೀಜಿ ವಹಿಸಿ, ಹಿರಿಯರಿಲ್ಲದ ಮನೆ ಸ್ಮಶಾನದಂತೆ ಎಂಬ ಮಾತು ಸತ್ಯವಾಗಿದೆ. ಭಾರತ ದೇಶದಲ್ಲಿ ಸಂಸ್ಕೃತಿ, ಸಂಪ್ರದಾಯಗಳು ಇಂದಿಗೂ ಜೀವಂತವಾಗಿದ್ದರೆ ಅದಕ್ಕೆ ಹಿರಿಯ ಜೀವಿಗಳೇ ಕಾರಣ. ಸರ್ಕಾರಿ ಕೆಲಸದಿಂದ ನಿವೃತ್ತಿ ಪಡೆದಿರಬಹುದು. ಆದರೆ ಸಮಾಜ ತಿದ್ದುವ ಕೆಲಸದಲ್ಲಿ ನಿಮ್ಮಗಳ ಸೇವೆ ಇನ್ನು ಬೇಕಾಗಿದೆ ಎಂದರರು.

ಅಧ್ಯಕ್ಷತೆಯನ್ನು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಉಜ್ಜಿನಪ್ಪ ವಹಿಸಿದ್ದರು. ಹಿರಿಯ ನಾಗರೀಕರಾದ ಎಸ್.ಟಿ.ಶಾಂತಗಂಗಾಧರ್, ಎಂ.ಅಣ್ಣೋಜಿರಾವ್ ಪವಾರ್ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ 75 ವರ್ಷ ತುಂಬಿದ ಸಂಘದ ಸದಸ್ಯರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೆ.ಜಿ.ಭರತ್ ರಾಜ್, ಜಿ.ಚಿನ್ನಸ್ವಾಮಿ, ಎಂ.ಯು.ಚನ್ನಬಸಪ್ಪ, ಆರ್.ಈ.ಲೋಕೇಶ್ವರಪ್ಪ ಸೇರಿದಂತೆ ಮೊದಲಾದವರು ಹಾಜರಿದ್ದರು.

- - -

-9ಕೆಸಿಎನ್ಜಿ1: ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸಿದರು.

-9ಕೆಸಿಎನ್‌ಜಿ2: 75 ವರ್ಷ ತುಂಬಿದ ಸದಸ್ಯರನ್ನು ಶಾಸಕ ಬಸವರಾಜ ವಿ. ಶಿವಗಂಗಾ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತಿತರ ಗಣ್ಯರು ಗೌರವಿಸಿದರು.