ಸಂಸ್ಕಾರಯುತ ಭಾರತಕ್ಕಾಗಿ ಮಾರ್ಗದರ್ಶನದ ಅಗತ್ಯವಿದೆ-ಡಾ. ಕೆ. ಗಣಪತಿ ಭಟ್‌

| Published : May 18 2024, 12:35 AM IST

ಸಂಸ್ಕಾರಯುತ ಭಾರತಕ್ಕಾಗಿ ಮಾರ್ಗದರ್ಶನದ ಅಗತ್ಯವಿದೆ-ಡಾ. ಕೆ. ಗಣಪತಿ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕಾರಯುತ ಭಾರತಕ್ಕಾಗಿ ಮಕ್ಕಳು ಮಾತ್ರವಲ್ಲ, ಹಿರಿಯರಿಗೂ ಕೂಡ ಈಗ ಒಳ್ಳೆಯ ಮಾರ್ಗದರ್ಶನದ ಅಗತ್ಯವಿದೆ. ಕುಟುಂಬದ ಹಿತಕ್ಕಾಗಿ ಒಂದಷ್ಟು ಕಾಲ ಮೀಸಲಿಡುವ ಪರಿಪಾಠ ಪ್ರತಿ ಮನೆಯದ್ದಾಗಬೇಕು ಎಂದು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ನಾದಮಯ ಸಂಸ್ಕಾರ ಶಿಬಿರದ ಸಂಚಾಲಕ ಡಾ. ಕೆ. ಗಣಪತಿ ಭಟ್ ಕರೆ ನೀಡಿದರು.

ಹಾನಗಲ್ಲ: ಸಂಸ್ಕಾರಯುತ ಭಾರತಕ್ಕಾಗಿ ಮಕ್ಕಳು ಮಾತ್ರವಲ್ಲ, ಹಿರಿಯರಿಗೂ ಕೂಡ ಈಗ ಒಳ್ಳೆಯ ಮಾರ್ಗದರ್ಶನದ ಅಗತ್ಯವಿದೆ. ಕುಟುಂಬದ ಹಿತಕ್ಕಾಗಿ ಒಂದಷ್ಟು ಕಾಲ ಮೀಸಲಿಡುವ ಪರಿಪಾಠ ಪ್ರತಿ ಮನೆಯದ್ದಾಗಬೇಕು ಎಂದು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ನಾದಮಯ ಸಂಸ್ಕಾರ ಶಿಬಿರದ ಸಂಚಾಲಕ ಡಾ. ಕೆ. ಗಣಪತಿ ಭಟ್ ಕರೆ ನೀಡಿದರು.ಹಾನಗಲ್ಲ ತಾಲೂಕಿನ ತಿಳವಳ್ಳಿಯಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ, ತಿಳವಳ್ಳಿಯ ಹೂವಮ್ಮ ಚಂಚಿ ಪ್ರತಿಷ್ಠಾನ ಸಂಯುಕ್ತವಾಗಿ ಅಕ್ಷರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ ೧೦ ದಿನಗಳ ಕಾಲ ರಾಜ್ಯ ಮಟ್ಟದ ೧೫ನೇ ನಾದಮಯ ಸಂಸ್ಕಾರ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು.

ರಜೆಯಲ್ಲಿ ಮಕ್ಕಳನ್ನು ಸಂಬಾಳಿಸುವುದು ಕಷ್ಟ ಎನ್ನುವ ಪಾಲಕರ ಮನಸ್ಸಿನ ಸ್ಥಿತಿ ಇದೆ. ಆದರೆ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕಾಗಿ, ಪ್ರತಿಭೆಯ ವಿಕಾಸಕ್ಕಾಗಿ, ಕತೃತ್ವ ಶಕ್ತಿಯನ್ನು ಇಮ್ಮಡಿಗೊಳಿಸಲು, ಜ್ಞಾನ ಕ್ಷಿತಿಜವನ್ನು ವಿಸ್ತರಿಸಲು ಸಕಾಲದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಬೇಕಾಗಿದೆ. ರಜಾ ಕಾಲವನ್ನು ಕಳೆಯುವುದಲ್ಲ. ಸಂಸ್ಕಾರ ಶಿಬಿರಗಳನ್ನು ಯೋಜಿಸಿ ಯೋಚಿಸಿ ಮಕ್ಕಳಿಗೆ ಸುಪಯೋಗ ಮಾಡಬೇಕಾಗಿದೆ. ಪಾಠ ಪಠ್ಯ ಹೊರತಾದ ಹತ್ತು ಹಲವು ಉತ್ತಮ ಸಂಗತಿಗಳನ್ನು ಕಲಿಯುವುದಕ್ಕಾಗಿ ಮೀಸಲಿಡಬೇಕಾಗಿದೆ. ನಾಳೆಗಾಗಿ ಇಂದೇ ಮಕ್ಕಳನ್ನು ಸಂಸ್ಕಾರಯುತರಾಗಿ ಬೆಳೆಸುವ ಸಂಕಲ್ಪ ಪಾಲಕರದ್ದಾಗಬೇಕಾಗಿದೆ. ಸಂಗೀತ ಮತ್ತು ಸಂಸ್ಕೃತ ಧರ್ಮ ಜಾತಿ ಮೀರಿದ ಜ್ಞಾನ ಸಂಗಮ. ಇವು ಸಂಸ್ಕಾರವಂತರಿಗೆ ಮೀಸಲು ಎಂದರು.ಶಿಬಿರ ಉದ್ಘಾಟಿಸಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಭಾರತೀಯ ಸಂಸ್ಕೃತಿಯಲ್ಲಿ ಯೋಗ ಧ್ಯಾನ ಭಜನೆ ಸೇರಿದಂತೆ ಮನಸ್ಸು ಬುದ್ಧಿ ವಿವೇಕಗಳನ್ನು ಶುಚಿಯಾಗಿಡಲು ಹತ್ತು ಹಲವು ಸಂಗತಿಗಳಿವೆ. ಆದರೆ ಇಂದಿನ ಇಂಗ್ಲಿಷ್ ಮಾದರಿ ಶಿಕ್ಷಣದ ಮೋಹಕ್ಕೆ ಸಾಂಸ್ಕೃತಿಕ ಶಿಕ್ಷಣದಿಂದ ದೂರವಾಗುತ್ತಿರುವುದೇ ದೊಡ್ಡ ಲೋಪವಾಗಿದೆ. ಭವಿಷ್ಯದ ಭಾರತದ ಎಲ್ಲ ಶಕ್ತಿ ಕನಸ ಇಂದಿನ ಮಕ್ಕಳೇ ಆಗಿರುವುದರಿಂದ ಈಗಲೇ ಮಕ್ಕಳನ್ನು ಸಂಸ್ಕಾರಭರಿತರನ್ನಾಗಿಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆಯನ್ನು ಮರೆಯಬಾರದು ಎಂದರು.ಅಕ್ಷರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಪುಟ್ಟರಾಜ ಚಂಚಿ ಮಾತನಾಡಿ, ಜ್ಞಾನಕ್ಕೆ ಜಾತಿ ಧರ್ಮದ ಕಟ್ಟಳೆ ಇಲ್ಲ. ದೇಶಿ ಕ್ರೀಡೆಗಳು, ಧಾರ್ಮಿಕ ಆಚರಣೆಗಳು ನಮ್ಮ ಮನಸ್ಸನ್ನು ಆಹ್ಲಾದಗೊಳಿಸುವುದರ ಜೊತೆಗೆ ಉತ್ತಮ ಸಂಸ್ಕಾರ, ಮಾನಸಿಕ ಶಕ್ತಿಯನ್ನು ನೀಡುವಂತಹವುಗಳು. ಈಗ ಮೊಬೈಲ್, ಟಿವಿ ಮಾಧ್ಯಮವನ್ನು ಅತಿಯಾಗಿ ಬಳಸಿ ಅದರ ದುರುಪಯೋಗಕ್ಕೆ ಅವಕಾಶವಾಗದಂತೆ ಗಮನ ಹರಿಸಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ಸಂಗತಿಗಳನ್ನು ತಿಳಿಸಿ ಅತ್ತ ಚಿತ್ತ ಉಳಿಸಬೇಕಾಗಿದೆ. ಇಂತಹ ಶಿಬಿರಗಳು ನಿತ್ಯ ನಿರಂತರ ಹಳ್ಳಿ ಪಟ್ಟಣಗಳಲ್ಲಿ ನಡೆಯಬೇಕು ಎಂದರು. ಅಕ್ಷರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ ಪುರಾಣಿಮಠ, ರಾಧಾ ಸವಣೂರ, ರಾಣಿಬೆನ್ನೂರಿನ ಸಂಸ್ಕೃತ ಭಾರತಿ ಸಂಸ್ಥೆಯ ರತ್ನಾ ಬೈರಕ್ಕನವರ, ಪರಶುರಾಮ ಜಾಧವ, ಗಂಗಾಧರ ಇನಾಂದಾರ ಅತಿಥಿಗಳಾಗಿದ್ದರು.