ಸಾರಾಂಶ
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಮೂಲ್ಕಿಯ ಬಪ್ಪನಾಡು ದೇವಳದ ಜ್ಞಾನ ಮಂದಿರದಲ್ಲಿ ಪಿ.ಯು ಶಿಕ್ಷಣದ ಭವಿಷ್ಯದ ಅವಕಾಶಗಳು ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದ ಮೌಲ್ಯಗಳು ಕುಸಿಯುತ್ತಿದ್ದು ಜಾಗೃತಿ ಅಗತ್ಯವಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಶಿಕ್ಷಕರ ಜೊತೆ ಪೋಷಕರ ಪಾತ್ರವು ಮಹತ್ತರವಾಗಿದೆ ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಮೂಲ್ಕಿಯ ಬಪ್ಪನಾಡು ದೇವಳದ ಜ್ಞಾನ ಮಂದಿರದಲ್ಲಿ ನಡೆದ ಪಿ.ಯು ಶಿಕ್ಷಣದ ಭವಿಷ್ಯದ ಅವಕಾಶಗಳು ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಟ್ಟು ಶಿಕ್ಷಣಕ್ಕೆ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಧನೆ ಮಾಡಿ ದೇಶದ ಸಂಪನ್ಮೂಲ ವ್ಯಕ್ತಿಗಳಾಗಬೇಕು ಎಂದರು.
ಮಕ್ಕಳು ಅತಿಯಾದ ಆತ್ಮವಿಶ್ವಾಸ ದೂರವಿಟ್ಟು ಮುಂಬರುವ ಎಸ್ ಎಸ್ ಎಲ್ ಸಿ , ಪಿಯುಸಿ ಪರೀಕ್ಷೆಗಳಿಗೆ ಸಮಯ ಪ್ರಜ್ಞೆ ಮೂಲಕ ಮಾನಸಿಕ ಸಿದ್ಧತೆ ನಡೆಸಬೇಕು ಎಂದು ಹೇಳಿದರು.ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಂಗ ಕರ್ಮಿ ಚಂದ್ರಶೇಖರ ಸುವರ್ಣ, ಬಿಜೆಪಿ ಮುಖಂಡರಾದ ಸುನಿಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪ್ರಭಾತ್ ಸ್ವಾಗತಿಸಿದರು. ಡಾ. ಸುಧಾರಾಣಿ ನಿರೂಪಿಸಿದರು. ಉಪನ್ಯಾಸಕಿ ಮಾಧವಿ ಚಡಗ ವಂದಿಸಿದರು.ಮೂಲ್ಕಿ ತಾಲೂಕಿನ ಸುಮಾರು 18 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.