ವಚನಗಳಿಂದ ಸಮಾಜಕ್ಕೆ ಮಾರ್ಗದರ್ಶನ: ಡಾ.ವಿದ್ಯಾಕುಮಾರಿ

| Published : Feb 12 2025, 12:32 AM IST

ವಚನಗಳಿಂದ ಸಮಾಜಕ್ಕೆ ಮಾರ್ಗದರ್ಶನ: ಡಾ.ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

12ನೇ ಶತಮಾನದಲ್ಲಿದ್ದ ವಚನಕಾರರು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದುವಲ್ಲಿ ನಿರತರಾಗಿದ್ದರು. ವಚನಕಾರರ ವಚನಗಳನ್ನು ಹಾಗೂ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ವಚನಕಾರರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ವಚನಗಳನ್ನು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ವಚನಕಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಸಮಾನತೆ, ಭ್ರಾತೃತ್ವ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳುವುದರ ಜೊತೆಗೆ ತಾವು ಮಾಡುವ ಕಾಯಕದಲ್ಲಿ ದೇವರನ್ನೇ ಕಂಡುಕೊಂಡು ತಮ್ಮ ವಚನಗಳ ಮೂಲಕ ಜನರಲ್ಲಿ ಅರಿವು ಮತ್ತು ಜ್ಞಾನವನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಒಳಗೊಂದು ಹೊರಗೊಂದು ಭಾವನೆಗಳನ್ನು ಹೊಂದಿರುವ ಪ್ರಸಕ್ತ ಸಮಾಜದಲ್ಲಿ, ವಚನಕಾರರು 800 ವರ್ಷಗಳ ಹಿಂದೆಯೇ ತಮ್ಮ ನೇರ ನಡೆನುಡಿಯ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು ಎಂದರು.12ನೇ ಶತಮಾನದಲ್ಲಿದ್ದ ಆರ್ಥಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸಿದರು. ಅವರಂತೆ ನಾವು ಕೂಡ ಈ ಎಲ್ಲಾ ಬಿಕ್ಕಟ್ಟನ್ನು ತೊರೆದು ಹಾಕಲು ಮುಖ್ಯ ಆದ್ಯತೆ ನೀಡಬೇಕಾಗಿದೆ ಎಂದರು.

ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ವಿಶೇಷ ಉಪನ್ಯಾಸ ನೀಡಿ,

ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗಪೆದ್ದಿ ಮೊದಲಾದ ಕಾಯಕ ಶರಣರು ಜಾತಿ ಸಂಕೋಲೆಯಿಂದ ಹೊರಬಂದು ಸಮಾನತೆಯ ತತ್ವ ಪ್ರತಿಪಾದಿಸಿದರು. ಕಾಯಕ ಶರಣರು ಕಾಯಕವನ್ನು ಪ್ರೀತಿಸಿ ಗೌರವಿಸಿದರೆ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ನಂಬಿದ್ದರು ಹಾಗೂ ಅದರಂತೆ ಲೋಕಕ್ಕೆ ಕಾಯಕ ತತ್ವವನ್ನು ಪ್ರತಿಪಾದಿಸಿದರು ಎಂದರು.

ಉಪತಹಸೀಲ್ದಾರರಾದ ನವನೀತ್, ರಾಮಚಂದ್ರ ಭಟ್, ಶ್ರೀನಿಧಿ, ಜಾನಪದ ಕಲಾವಿದ

ವಾಸು ಬನ್ನಂಜೆ ಹಾಗೂ ಆಡಳಿತ ಸಿಬ್ಬಂದಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ನಿರೂಪಿಸಿ ವಂದಿಸಿದರು.