ಸಾರಾಂಶ
ಕೋಲಾರ, ಮಂಗಳೂರು ಬಳಿಕ ಶಿವಮೊಗ್ಗದಲ್ಲೂ ನಡೆದ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ, ಶೌಚಗುಂಡಿ ಸ್ವಚ್ಛತೆ ಪ್ರಕರಣಗಳು ಸರ್ಕಾರದ ಮೇಲೆ ಭಾರಿ ಪರಿಣಾಮ ಬೀರಿದಂತಿವೆ. ಶಾಲೆಯಲ್ಲಿ ಸ್ವಚ್ಛತೆ ಕಾಪಾಡುವ ಸಂಬಂಧ ಶೀಘ್ರದಲ್ಲೇ ಗೈಡ್‌ಲೈನ್ಸ್ ಹೊರಡಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀರ್ಥಹಳ್ಳಿಕಾರ್ಯಕ್ರಮದಲ್ಲಿ ಭರವಸೆ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಶಾಲೆಯಲ್ಲಿ ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದು. ಮಕ್ಕಳಿಂದ ಕೇವಲ ವ್ಯಾಸಂಗ ಮಾಡಿಸಬೇಕು ಅಷ್ಟೇ. ಈ ರೀತಿಯ ಘಟನೆಗಳು ಇಲಾಖೆಗೆ, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾರಣವಾಗುತ್ತದೆ. ಶೀಘ್ರದಲ್ಲೇ ಗೈಡ್‌ಲೈನ್ಸ್ ಹೊರಡಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.ತಾಲೂಕಿನ ಕುಪ್ಪಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಸ್ವಚ್ಛತೆ ಕೊರತೆ ಸಹ ಇದೆ. ಶಾಲಾ ಸ್ವಚ್ಛತೆ ಕೇವಲ ಶಿಕ್ಷಕರ ಜವಾಬ್ದಾರಿ ಅಲ್ಲ, ಎಸ್‌ಡಿಎಂಸಿ ಸಹ ಜವಾಬ್ದಾರಿ ತಗೋಬೇಕು. ಈ ಕುರಿತು ಶೀಘ್ರದಲ್ಲೇ ಗೈಡ್‌ಲೈನ್ಸ್ ಹೊರಡಿಸಲಾಗುವುದು. ಈ ರೀತಿಯ ಪ್ರಕರಣ ಪುನರಾವರ್ತನೆಯಾದರೆ ಇಲಾಖೆಯಿಂದ ಕಠಿಣವಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿಸಿಎಂ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಡಿಸಿಎಂ ವಿಚಾರದಲ್ಲಿ ಅವರವರು ಸ್ವಂತವಾಗಿ ಏನೇನೋ ಚರ್ಚೆ ಮಾಡ್ತಾರೆ. ಆದರೆ, ಹೈಕಮಾಂಡ್ ಇದೆ, ಅದು ತೀರ್ಮಾನ ಕೈಗೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದರು.ಶಿವಮೊಗ್ಗ ತುಂಗಾಭದ್ರಾ ಸಕ್ಕರೆ ಕಾರ್ಖಾನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋತಿರುವವರ ಜೊತೆ ಬಹಿರಂಗ ಚರ್ಚೆ ಏನು? ಬಿಜೆಪಿ ಜಿಲ್ಲಾಧ್ಯಕ್ಷರು ಅವರ ಸಂಸದರ ಜೊತೆ ಚರ್ಚೆ ಮಾಡಲಿ ಎಂದು ತಿರುಗೇಟು ನೀಡಿದರು.
ಮೊದಲ ಬಾರಿಗೆ ಕುಪ್ಪಳಿಗೆ ಭೇಟಿ ನೀಡಿದ್ದೇನೆ. ಕುವೆಂಪು ಪ್ರತಿಷ್ಠಾನಕ್ಕೆ ಏನೇನು ಕೆಲಸ ಆಗಬೇಕು ಅದು ಮಾಡ್ತೀನಿ. ಕುವೆಂಪು ಅವರಿಗೆ ಗೌರವ ಕೊಟ್ಟರೆ ಇಡೀ ರಾಜ್ಯಕ್ಕೆ ಗೌರವ ಕೊಟ್ಟಂತೆ ಆಗುತ್ತದೆ ಎಂದರು.- - - - (ಫೋಟೋ: ಮಧು ಬಂಗಾರಪ್ಪ)