ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಕೆ ಮಾಡುವಂತಾಗಲು ಶಿಕ್ಷಕರಿಗೆ ತರಬೇತಿ, ಪಾಲಕರಿಗೆ ಜಾಗೃತಿ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಂಶವುಳ್ಳ ಕರಡು ನೀತಿ ರೂಪಿಸಿದ್ದು, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಅಂತಿಮ ನೀತಿ ಪ್ರಕಟಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಕೆ ಮಾಡುವಂತಾಗಲು ಶಿಕ್ಷಕರಿಗೆ ತರಬೇತಿ, ಪಾಲಕರಿಗೆ ಜಾಗೃತಿ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಂಶವುಳ್ಳ ಕರಡು ನೀತಿ ರೂಪಿಸಿದ್ದು, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಅಂತಿಮ ನೀತಿ ಪ್ರಕಟಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಬುಧವಾರ ಆರೋಗ್ಯಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿ, ಆರೋಗ್ಯ ಇಲಾಖೆ, ಪ್ರಾಥಮಿಕ ಶಿಕ್ಷಣ ಇಲಾಖೆ, ನಿಮ್ಹಾನ್ಸ್ ಸಂಸ್ಥೆ ಸಹಯೋಗದಲ್ಲಿ ನಡೆದ ಅಧ್ಯಯನದ ಪ್ರಕಾರ ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿ ಡಿಜಿಟಲ್ ಸಮಸ್ಯೆಗೆ ತುತ್ತಾಗಿರುವುದು ಕಂಡುಬಂದಿದೆ. ಹೀಗಾಗಿ ಆರಂಭಿಕ ಹಂತದಲ್ಲಿ ಮಕ್ಕಳ ತೊಂದರೆ ಗುರುತು ಮಾಡಿ ಪರಿಹಾರ ಕಂಡುಕೊಳ್ಳಲು ಜವಾಬ್ದಾರಿಯುತ ಡಿಜಿಟಲ್ ಬಳಕೆ ಬಗ್ಗೆ ನೀತಿ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಮಕ್ಕಳಲ್ಲಿ ಅತಿಯಾದ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಕೆ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಉದ್ವೇಗ, ನಿದ್ರಾಹೀನತೆ, ಏಕಾಗ್ರತೆ ಕೊರತೆ ಸೇರಿ ಹಲವು ಸಮಸ್ಯೆಗಳು ಕಾಣಿಸುತ್ತಿವೆ. ಸಾಮಾಜಿಕ ಪ್ರತ್ಯೇಕತೆ ಮನೋಭಾವ ಬೆಳೆಯಲು, ಶೈಕ್ಷಣಿಕವಾಗಿ ಹಿಂದುಳಿಯಲು ಇದು ಕಾರಣವಾಗುತ್ತಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದರು.ಸಾರ್ವಜನಿಕ ಅಭಿಪ್ರಾಯ ಆಹ್ವಾನಈ ಕರಡನ್ನು ಆರೋಗ್ಯ ಇಲಾಖೆಯ https://hfwcom.karnataka.gov.in ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ. ಆಸಕ್ತರು (ಫೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇತರರು) ತಮ್ಮ ಅಭಿಪ್ರಾಯ ಹಾಗೂ ಸಲಹೆಗಳಲ್ಲಿ 15 ದಿನಗಳೊಳಗೆ dd6mhkar@gmail.com ಮತ್ತು ddehospital-hfws@karnataka.gov.in ಇಮೇಲ್ ವಿಳಾಸಕ್ಕೆ ಇ-ಮೇಲ್ ಮೂಲಕ ತಿಳಿಸಬಹುದು.+++ತಳಮಟ್ಟದ ಸಮಸ್ಯೆ ಅರಿಯಲು ಅಧ್ಯಯನ:ಆರೋಗ್ಯ ಇಲಾಖೆ 9,10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಕರಡು ನೀತಿ ಮಾಡಿದ್ದೇವೆ. ಮಕ್ಕಳು ಒಳಗೊಂಡಂತೆ ಶಿಕ್ಷಕರು, ಶಾಲಾ ಸಂಸ್ಥೆಗಳು, ಪಾಲಕರನ್ನು ಸೇರಿಸಿಕೊಂಡು ನೀತಿ ರೂಪಿಸಲಾಗಿದೆ. ಇದಕ್ಕಾಗಿ ನಿಮ್ಹಾನ್ಸ್ ಸೇರಿ ತಜ್ಞ ಮಾನಸಿಕ ವೈದ್ಯರ ಜತೆ ಸಭೆ ನಡೆಸಿದ್ದೇವೆ. ಪೋಷಕರ ಅಭಿಪ್ರಾಯ, ಕೇಸ್ ಸ್ಟಡಿ ಮೂಲಕ ಸಮಸೆಗಳನ್ನು ತಳಮಟ್ಟದಿಂದ ಅರಿಯುವ ಪ್ರಯತ್ನ ಮಾಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಪೋಷಕರಿಗೆ ಜಾಗೃತಿ ಮೂಡಿಸುತ್ತೇವೆ:ಇತ್ತೀಚೆಗೆ ಮೊಬೈಲ್‌ನ ಅತಿಯಾದ ಬಳಕೆಯಿಂದ ತಂತ್ರಜ್ಞಾನದ ವ್ಯಸನ ಸಮಸ್ಯೆಗಳು ಶುರುವಾಗಿವೆ. ಈ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮೂಲಕ ನಿಯಂತ್ರಿಸುವ ಕಾರ್ಯ ಆಗಬೇಕಿದೆ. ಈ ಸಂಬಂಧ ಡಿಜಿಟಲ್ ಬಳಕೆ ಕುರಿತು ಶಾಲೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಮಕ್ಕಳಿಗೆ ಹೇಗೆ ತಿಳಿಸಬೇಕು? ಹಾಗೂ ಮನೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೇಗೆ ಮಾಡಬೇಕು? ಎಂಬುದನ್ನು ಕಲಿಸಲು ಶಿಕ್ಷಕರಿಗೆ ತಜ್ಞರಿಂದ ತರಬೇತಿ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.ಡಿಜಿಟಲ್ ವ್ಯಸನ ಮುಕ್ತಗೊಳಿಸುವುದು ಹೇಗೆ?:
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸುವುದು. ದಿನಕ್ಕೆ 1 ಗಂಟೆಗಿಂತ ಕಡಿಮೆ ಮನರಂಜನಾ ತಂತ್ರಜ್ಞಾನ ಬಳಕೆ ಕುರಿತು ಶಾಲಾ ಡಿಜಿಟಲ್ ಬಳಕೆ ನೀತಿ ಜಾರಿ ಮಾಡುವುದು. ಡಿಜಿಟಲ್ ಡಿಟಾಕ್ಸ್ ಮಾದರಿ ಮೂಲಕ ಶಿಕ್ಷಕರಿಗೆ ವಿದ್ಯಾರ್ಥಿಯ ತಂತ್ರಜ್ಞಾನ ವ್ಯಸನದ ಲಕ್ಷಣ ಪತ್ತೆ ಹಾಗೂ ಅರಿವು ಮೂಡಿಸುವ ಕುರಿತು ತರಬೇತಿ ನೀಡುವುದು. ರಾಜ್ಯ ಸರ್ಕಾರದಿಂದ ಶಾಲೆಗಳಿಗೆ ನಿರ್ದೇಶನ, ತಂತ್ರಜ್ಞಾನವನ್ನು ಆರೋಗ್ಯಕರವಾಗಿ ಬಳಸುವ ಕುರಿತು ಶಿಕ್ಷಕರ ತರಬೇತಿ ಕಾರ್ಯಕ್ರಮ ರೂಪಿಸುವುದು. ಪೋಷಕರಿಗೆ ಶಾಲೆಯಿಂದ ಮಾಹಿತಿ ಹಾಗೂ ಆಫ್‌ಲೈನ್ ಚಟುವಟಿಕೆಗಳಿಗೆ ಉತ್ತೇಜನದ ಮೂಲಕ ಡಿಜಿಟಲ್ ವ್ಯಸನ ಕಡಿಮೆ ಮಾಡುವ ಬಗ್ಗೆ ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.