ಸಾರಾಂಶ
ಬಳ್ಳಾರಿ: ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ಪ್ರಸಿದ್ಧಿ ಪಡೆದ ಬೆಂಗಳೂರಿನ ಗುಣಶೀಲ ಸರ್ಜಿಕಲ್ ಆ್ಯಂಡ್ ಮೆಟರ್ನಿಟಿ ಆಸ್ಪತ್ರೆಯ ಅಂಗಸಂಸ್ಥೆಯಾದ ಗುಣಶೀಲ ಫರ್ಟಿಲಿಟಿ ಕೇಂದ್ರವು ಇದೀಗ ಬಳ್ಳಾರಿಯಲ್ಲೂ ತನ್ನ ಘಟಕ ಆರಂಭಿಸಿದೆ.
ಇಲ್ಲಿನ ಪಾರ್ವತಿ ನಗರದ ಮುಖ್ಯರಸ್ತೆಯಲ್ಲಿ ಜರುಗಿದ ಕೇಂದ್ರದ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಗುಣಶೀಲ ಸರ್ಜಿಕಲ್ ಆ್ಯಂಡ್ ಮೆಟರ್ನಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಂತಾನೋತ್ಪತ್ತಿ ತಜ್ಞೆ ಡಾ. ದೇವಿಕಾ ಗುಣಶೀಲ, ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ನಮಗಿರುವ ಅನುಭವವನ್ನು ಬಳ್ಳಾರಿಗೆ ಪರಿಚಯಿಸುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಕರ್ನಾಟಕದ ರಾಯಚೂರು, ಯಾದಗಿರಿ, ಹಾವೇರಿ, ಕೊಪ್ಪಳ, ದಾವಣಗೆರೆ, ಗದಗ, ಅದೇ ರೀತಿ ಆಂಧ್ರಪ್ರದೇಶದ ಕಡಪ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ನಮ್ಮ ಆಸ್ಪತ್ರೆಗೆ ಬರುತ್ತಿದ್ದ ಜನರು ಅನೇಕ ವರ್ಷಗಳಿಂದ ತಮಗೆ ಸಮೀಪದ ಸ್ಥಳದಲ್ಲಿ ಫರ್ಟಿಲಿಟಿ ಕೇಂದ್ರ ಆರಂಭಿಸುವಂತೆ ಕೇಳುತ್ತಿದ್ದರು. ಬಳ್ಳಾರಿಯಲ್ಲಿ ಕೇಂದ್ರ ಆರಂಭಿಸಿರುವುದರಿಂದ ಅವರಿಗೆ ಸಮೀಪದ ಸ್ಥಳದಲ್ಲಿ ಸುಲಭವಾಗಿ ಚಿಕಿತ್ಸೆ ಲಭಿಸಲಿದೆ. ಇದರಿಂದಾಗಿ ಸಂತಾನಹೀನ ದಂಪತಿಗಳು ದೂರದ ಮಹಾನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ತಪ್ಪಲಿದೆ. ಮನೆಯ ಸಮೀಪದಲ್ಲೇ ಚಿಕಿತ್ಸೆ ಲಭಿಸುವುದರಿಂದ ಮಕ್ಕಳನ್ನು ಪಡೆಯುವ ಅವರ ಕನಸು ನನಸಾಗಲಿದೆ ಎಂದು ಹೇಳಿದರು.ಇತ್ತೀಚಿನ ವರ್ಷಗಳಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಎದುರಾಗುವ ಫ್ಯಾಲೋಪಿನ್ ಟ್ಯೂಬ್ ಬ್ಲಾಕ್, ಪದೇ ಪದೇ ಗರ್ಭಪಾತ ಹಾಗೂ ವಿವರಿಸಲಾಗದ ಸಂತಾನಹೀನತೆ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಈ ಸಮಸ್ಯೆಗಳಿಗೆ ಚಿಕಿತ್ಸೆ ಲಭಿಸುವಂತೆ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಮಕ್ಕಳಿಲ್ಲದ ಅನೇಕ ದಂಪತಿಗಳು ಸಂತಾನೋತ್ಪತ್ತಿ ತಜ್ಞ ವೈದ್ಯರನ್ನು ಭೇಟಿಯಾಗಲು ನಾನಾ ಕಾರಣಗಳಿಂದಾಗಿ ಹಿಂಜರಿಯುತ್ತಾರೆ. ಅವರಲ್ಲಿ ಕೆಲವು ತಪ್ಪು ಕಲ್ಪನೆಗಳು ಅಥವಾ ಆತಂಕಗಳು ಇರುತ್ತವೆ. ಸಂತಾನಹೀನತೆಗೆ ಯಶಸ್ವಿ ಚಿಕಿತ್ಸೆ ಪಡೆಯಲು ದಂಪತಿಗಳು ಸಂತಾನ ಸಾಫಲ್ಯ ತಜ್ಞರನ್ನು ಭೇಟಿಯಾಗಿ, ನಿಯಮಿತವಾಗಿ ಚೆಕಪ್ ಮಾಡಿಸಿಕೊಳ್ಳುವ ಅಗತ್ಯವಿರುತ್ತದೆ. ಬಳ್ಳಾರಿಯಲ್ಲಿ ಆರಂಭವಾಗಿರುವ ನಮ್ಮ ಕೇಂದ್ರವು ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ, ಮಕ್ಕಳಿಲ್ಲದ ದಂಪತಿಗಳಿಗೆ ಅಗತ್ಯವಿರುವ ಬೆಂಬಲ ಹಾಗೂ ಮಾರ್ಗದರ್ಶನವನ್ನು ನೀಡಲಿದೆ ಎಂದೂ ಡಾ. ದೇವಿಕಾ ಗುಣಶೀಲ ತಿಳಿಸಿದರು.ಇದೇ ವೇಳೆ ಗುಣಶೀಲ ಸರ್ಜಿಕಲ್ ಅಂಡ್ ಮ್ಯಾಟರ್ನಿಟಿ ಆಸ್ಪತ್ರೆಯ ನಿರ್ದೇಶಕ ಡಾ. ರಾಜಶೇಖರ್ ನಾಯಕ್ ಅವರು ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ತಮ್ಮ ಕೇಂದ್ರದ ಯಶಸ್ಸು, ಬದ್ಧತೆ ಹಾಗೂ ನೈಪುಣ್ಯದ ಬಗ್ಗೆ ಮಾಹಿತಿ ನೀಡಿದರು.
ಬಳ್ಳಾರಿಯ ಗುಣಶೀಲ ಐವಿಎಫ್ ಕೇಂದ್ರದಲ್ಲಿ ಅತ್ಯಾಧುನಿಕ ಹಾಗೂ ವಿಶ್ವ ದರ್ಜೆಯ ಸಂತಾನೋತ್ಪತ್ತಿ ಸೌಕರ್ಯಗಳು ಲಭ್ಯವಿರುತ್ತವೆ. ಜತೆಗೆ, ಐವಿಎಫ್ ಚಿಕಿತ್ಸೆಯಲ್ಲಿ ಪರಿಣತಿ ಸಾಧಿಸಿರುವ ತಜ್ಞರು ಇರುತ್ತಾರೆ. ಇಲ್ಲಿ ಐವಿಎಫ್, ಐಯುಐ, ಐಸಿಎಸ್‌ಐ, ಪ್ರಿ-ಇಂಪ್ಲಾಂಟೇಶನ್ ಜೆನೆಟಿಕ್ ಸ್ಕ್ರಿನಿಂಗ್ ಹಾಗೂ ಸಮಗ್ರ ಕೌನ್ಸೆಲಿಂಗ್ ಸೇರಿದಂತೆ ಹಲವು ರೀತಿಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.ಗುಣಶೀಲ ಫರ್ಟಿಲಿಟಿ ಕೇಂದ್ರದ ಪ್ರಾರಂಭೋತ್ಸವದ ಅಂಗವಾಗಿ ಬಳ್ಳಾರಿಯ ನೂತನ ಘಟಕದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಉಚಿತ ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಹಾಗೂ ವೈದ್ಯರ ಭೇಟಿ ಸೇವೆಗಳನ್ನು ನೀಡಲಾಯಿತು. ಮಕ್ಕಳನ್ನು ಹೊಂದುವ ಬಯಕೆಯಿರುವ ದಂಪತಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ವೈಯಕ್ತಿಕ ಸಲಹೆಗಳನ್ನು ನೀಡಲಾಯಿತು.
ಬಳ್ಳಾರಿಯಲ್ಲಿ ಆರಂಭವಾಗಿರುವ ನೂತನ ಕೇಂದ್ರದ ಬಗ್ಗೆ ಹಾಗೂ ಅಲ್ಲಿ ಲಭಿಸುವ ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ 08392-469595, 9663769595 ಸಂಪರ್ಕಿಸಬಹುದು.