ಸಾರಾಂಶ
ಮಾರುಕಟ್ಟೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಭೇಟಿ
ಕನ್ನಡಪ್ರಭ ವಾರ್ತೆ ಗಂಗಾವತಿಅನೇಕ ವರ್ಷಗಳಿಂದ ನನೆಗುಂದಿಗೆ ಬಿದ್ದಿರುವ ನಗರದ ಗುಂಡಮ್ಮ ಕ್ಯಾಂಪಿನ ಮಾರುಕಟ್ಟೆಯನ್ನು ಫೆ. 14ರಂದು ಉದ್ಘಾಟನೆ ಮಾಡಿ, ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ನಗರದ ಗುಂಡಮ್ಮ ಕ್ಯಾಂಪಿನಲ್ಲಿರುವ ಮಾರುಕಟ್ಟೆಗೆ ಭೇಟಿ ನೀಡಿ ಮಾರುಕಟ್ಟೆ ವೀಕ್ಷಿಸಿ ಮಾತನಾಡಿದ ಅವರು, ಕೋಟ್ಯಂತರ ರುಪಾಯಿ ಅನುದಾನ ಬಳಕೆ ಮಾಡಿಕೊಂಡು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಮಾರುಕಟ್ಟೆ ಬಳಕೆ ಮಾಡದೆ ಇರುವ ಕಾರಣಕ್ಕೆ ಸದ್ಯ ಎಲ್ಲ ಹಾಳಾಗಿ ಹೋಗಿದೆ. ಅದನ್ನು ಸರಿಪಡಿಸಿ ವ್ಯಾಪಾರಕ್ಕೆ ಅವಕಾಶ ಮಾಡಲಾಗುವುದು. ಫೆ. 14ರಂದು ಮಾರುಕಟ್ಟೆ ಉದ್ಘಾಟಿಸಲಾಗುವುದು ಎಂದು ಹೇಳಿದರು.
ನಗರದ ನಾನಾ ಸರ್ಕಲ್‍ಗಳಲ್ಲಿ, ರಸ್ತೆಗಳಲ್ಲಿ ವ್ಯಾಪಾರ ಮಾಡುವ ತರಕಾರಿ, ಹಣ್ಣು ಹಾಗೂ ಮಾಂಸದ ವ್ಯಾಪಾರಿಗಳು ಕಡ್ಡಾಯವಾಗಿ ಗುಂಡಮ್ಮ ಕ್ಯಾಂಪಿನ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬೇಕು. ಅದಕ್ಕಾಗಿಯೇ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿ, ನೆರಳಿನ ವ್ಯವಸ್ಥೆಯ ಜತೆಗೆ ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ವ್ಯಾಪಾರಿಗಳು ನಗರದ ರಸ್ತೆಗಳಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂದರು.₹50 ಲಕ್ಷಗಳಲ್ಲಿ ಅಭಿವೃದ್ಧಿ:ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಗುಂಡಮ್ಮ ಕ್ಯಾಂಪಿನ ಮಾರುಕಟ್ಟೆ ಹಾಳಾಗಿ ಹೋಗಿದೆ. ಅಲ್ಲಿನ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ, ಬಾಗಿಲುಗಳ ವ್ಯವಸ್ಥೆ ಮಾಡಲು ಕೆಕೆಆರ್‌ಡಿಬಿಯ ₹50 ಲಕ್ಷ ಅನುದಾನ ಬಳಕೆ ಮಾಡಲಾಗುವುದು. ರಸ್ತೆಯ ಅಕ್ಕಪಕ್ಕದಲ್ಲಿ ಇರುವ ಅಂಗಡಿಗಳ ತರಕಾರಿ, ಹಣ್ಣುಗಳ ಅಂಗಡಿಗಳನ್ನು ತೆರವುಗೊಳಿಸಲಾಗುವುದು. ಒಂದು ವೇಳೆಯಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಬಾರದೆ ನಗರದ ನಾನಾ ಸರ್ಕಲ್‍ಗಳಲ್ಲಿ ವ್ಯಾಪಾರ ನಡೆಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ನಂತರ ಮಾರುಕಟ್ಟೆಯನ್ನು ವೀಕ್ಷಣೆ ಮಾಡಿ, ಸ್ವಚ್ಛತೆ ಕಾಪಾಡಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ನಗರಸಭೆ ಅಧ್ಯಕ್ಷ ಮೌಲಾಸಾಬ್, ಉಪಾಧ್ಯಕ್ಷೆ ಪಾರ್ವತಿ ದುರುಗೇಶ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ನಗರಸಭೆ ಸಿಬ್ಬಂದಿ ಚೇತನ್‍ಕುಮಾರ, ಶಿವಕುಮಾರ, ನಾಗರಾಜ, ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ, ಮುಸ್ತಾಕ್ ಅಲಿ, ನೀಲಕಂಠ ಕಟ್ಟಿಮನಿ ಇದ್ದರು.