ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸ್ಥಳೀಯ ಶಾಸಕರ ನಿರ್ಲಕ್ಷ್ಯ ಹಾಗೂ ಅನುಭವದ ಕೊರತೆಯಿಂದ ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಕುಲಗೆಟ್ಟು ಹೋಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆದ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಶಾಸಕರು ಗುಂಡ್ಲುಪೇಟೆಗೆ ಬಂದು ಪೋಸು ಕೊಟ್ಟು ಹೋಗಲು ಮಾತ್ರ ಸೀಮಿತರಾಗಿ ದ್ದಾರೆ: ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ಶಾಸಕರ ಕಚೇರಿ ಮುಚ್ಚಿರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾಗಿ ಎರಡೂವರೆ ವರ್ಷದ ತನಕ ಕೆರೆಗಳಿಗೆ ನೀರು ತುಂಬಿಸದ ಕೀರ್ತಿ ಸಲ್ಲುತ್ತದೆ. ಕೆರೆಗಳಿಗೆ ನೀರು ತುಂಬಿಸಲು ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ. ಶಾಸಕರ ಈ ನಡೆಯನ್ನು ಬಿಜೆಪಿ ಹಾಗೂ ರೈತ ಸಮೂಹ ಖಂಡಿಸುತ್ತದೆ ಎಂದು ಹೇಳಿದರು.

ಕುಡಿವ ನೀರಿಗೂ ಬರ?


ತಾಲೂಕಿನ ಚಿಕ್ಕತುಪ್ಪೂರಲ್ಲಿ ಕುಡಿವ ನೀರಿನ ಹಾಹಾಕಾರ ಉಂಟಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿದ್ದರೆ ಬೋರ್‌ ವೆಲ್‌ ಮೂಲಕವಾದರೂ ನೀರು ಒದಗಿಸಬಹುದಿತ್ತು. ಕೆರೆಗಳಿಗೆ ನೀರು ತುಂಬಿಸಿದ ಕಾರಣ ಅಂತರ್ಜಲ ಕುಸಿದಿದೆ ಎಂದು ಅವರು ಹೇಳಿದರು.

ಸಾವು ನೋವು?

ತಾಲೂಕಿನಲ್ಲಿ ತುರ್ತು ಚಿಕಿತ್ಸೆಗಳಿಗೆ ೧೦೮ ಆ್ಯಂಬುಲೆನ್ಸ್‌ ಸಿಗುತ್ತಿಲ್ಲ. ಇತ್ತೀಚಗೆ ಬೇಗೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಆ್ಯಂಬುಲೆನ್ಸ್‌ ಇದ್ದರೆ ಒಂದಿಬ್ಬರ ಜೀವ ಉಳಿಯುತ್ತಿತ್ತು. ಇದ್ಯಾವುದು ಶಾಸಕರಿಗೆ ಕಾಣುತ್ತಿಲ್ಲ ಎಂದು ಹರಿ ಹಾಯ್ದರು.

ತಾಲೂಕಿನ ಕಲ್ಕಟ್ಟೆ ಕೆರೆ ಹಾಗೂ ನಲ್ಲೂರು ಅಮಾನಿ ಕೆರೆಗೂ ನೀರು ತುಂಬಿಸಬೇಕು. ಜೊತೆಗೆ ಬೇಗೂರು ಭಾಗದ ಕಮರಹಳ್ಳಿ ಕೆರೆಯಿಂದ ಮುಂದಿನ ಐದು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ರೈತರ ಶಾಪಕ್ಕೆ ಗುರಿಯಾಗುತ್ತೀರಿ ಎಂದು ಅವರು ಎಚ್ಚರಿಸಿದರು.

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಆದರೆ ಗುಂಡ್ಲುಪೇಟೆಯಲ್ಲಿ ಗಣೇಶ್‌ ಪ್ರಸಾದ್‌ ಗೆದ್ದ ಬಳಿಕ ತಾಲೂಕು ಆಡಳಿತ ವ್ಯವಸ್ಥೆ ಹಾಳಾಗಿ ಹೋಗಿದೆ. ಇದು ಕ್ಷೇತ್ರದ ದುರಂತ ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನ್ನೇಗಾಲಸ್ವಾಮಿ, ಮಂಡಲ ಮಾಜಿ ಅಧ್ಯಕ್ಷರಾದ ಎಲ್.ಸುರೇಶ್‌, ಎನ್.ಮಲ್ಲೇಶ್‌, ಮಂಡಲ ಉಪಾಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ, ಮಂಡಲ ಪ್ರಧಾನ ಕಾರ್ಯದರ್ಶಿ ಗರಗನಹಳ್ಳಿ ಮಹೇಂದ್ರ, ಸುನೀಲ್‌ ಮೂಡ್ಲು, ಪುರಸಭೆ ಮಾಜಿ ಸದಸ್ಯ ಸಿದ್ದಯ್ಯ ಹಸಗೂಲಿ ಇದ್ದರು.

ರೈತರ ನಾಯಿ ಅನ್ಸಿದ್ರೀ!

ಇದು ಸರೀನಾ ಶಾಸಕರೇ

ಶಾಸಕ ಗಣೇಶ್‌ಗೆ ಮಾಜಿ ಶಾಸಕ ನಿರಂಜನ್‌ ಪ್ರಶ್ನೆ

ಗುಂಡ್ಲುಪೇಟೆ: ರೈತರು ಕೆರಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರೆ ರೈತರನ್ನು ನಾಯಿ ಅನಿಸಿದ್ರಲ್ಲ ಇದು ಸರೀನಾ ಶಾಸಕರೇ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಪ್ರಶ್ನಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿ ನಿಮ್ಮ ಜೊತೆಗಿರುವಾತ ರೈತರನ್ನು ನಾಯಿ ಎಂದು ಹೇಳಿದ್ದಾರೆ ನಿಜ. ನೀವು ಹೇಳಿಲ್ಲ ಎನ್ನಲು ಆಗುವುದಿಲ್ಲ. ನೀವು ಹೇಳಲು ಆಗದೆ ನಿಮ್ಮ ಜೊತೆಗಿರುವವರ ಬಾಯಲ್ಲಿ ಹೇಳಿಸಿದ್ದೀರಿ ಎಂದು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.

ರೈತರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ನೀವು ಹೇಳಿಲ್ಲ ನಿಜ ನಿಮ್ಮ ಜೊತೆ ಇರುವಾತ ರೈತರನ್ನು ನಾಯಿಗೆ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರೂ ನೀವು ಏನು ಪ್ರತಿಕ್ರಿಯೆ ಕೊಟ್ಟಿಲ್ಲ. ಅಂದ್ಮೇಲೆ ನೀವು ಹೇಳಿದಂಗೆಯೇ ಆಗುತ್ತದೆ ಎಂದು ಪ್ರತಿಪಾದಿಸಿದರು.

ರೈತರು ಕಷ್ಟಪಟ್ಟು ಬೆಳೆದ ಫಸಲು ಉಳಿಸಿಕೊಳ್ಳಲು ರೋಷದಿಂದ ಮಾತನಾಡಿರಬಹುದು. ಆದರೆ ನಿಮಗೆ ಕ್ಷೇತ್ರದ ಜನರು ಆಯ್ಕೆ ಮಾಡಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಆ ಋಣಕ್ಕಾದರೂ ನೀವು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.