ಸಾರಾಂಶ
ಗುಂಡ್ಲುಪೇಟೆ ಪಟ್ಟಣದ ಜೋಡಿ ರಸ್ತೆಯಲ್ಲಿನ ಲೈಟ್ ಕಂಬಗಳಲ್ಲಿ ಆರಿ ನಿಂತ ಬೀದಿ ದೀಪಗಳು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಪರಿಮಿತಿಯ ಮೈಸೂರು-ಊಟಿ, ಗುಂಡ್ಲುಪೇಟೆ -ಚಾ.ನಗರ, ಗುಂಡ್ಲುಪೇಟೆ-ಕೇರಳ ಜೋಡಿ ರಸ್ತೆಯಲ್ಲಿ ಬಹುತೇಕ ಬೀದಿ ದೀಪಗಳು ಮತ್ತೆ ಕೆಟ್ಟು ನಿಂತಿದ್ದು ಜೋಡಿ ರಸ್ತೆಗಳು ರಾತ್ರಿ ಕಗ್ಗತ್ತಲಲ್ಲಿ ಮುಳುಗುತ್ತಿದೆ.ಪಟ್ಟಣದ ಜಿಪಂ ಕಚೇರಿಯಿಂದ ಆರಂಭವಾಗುವ ಜೋಡಿ ರಸ್ತೆಯಿಂದ (ಮೈಸೂರು-ಊಟಿ ರಸ್ತೆ) ಪ್ರವಾಸಿ ಮಂದಿರದ ತನಕ, ಪ್ರವಾಸಿ ಮಂದಿರದಿಂದ ಶಿವಾನಂದ ವೃತ್ತದ ತನಕ ಹಾಗೂ ಊಟಿ ಸರ್ಕಲ್‌ನಿಂದ ಮಹದೇವಪ್ರಸಾದ್ ನಗರ ತನಕದ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟಿವೆ. ಅಲ್ಲಲ್ಲಿ ಒಂದೊಂದು ಬೀದಿ ದೀಪಗಳು ಮಾತ್ರ ಬೆಳಕು ನೀಡುತ್ತಿವೆ. ರಾತ್ರಿಯ ವೇಳೆ ವಿದ್ಯುತ್ ಕೈ ಕೊಟ್ಟಾಗ ಮಾತ್ರ ಜೋಡಿ ರಸ್ತೆಗಳು ಸಂಪೂರ್ಣ ಕಗ್ಗತ್ತಲಲ್ಲಿ ಮುಳುಗುತ್ತವೆ. ಈ ಸಮಯದಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳ ಜೊತೆಗೆ ವಾಯು ವಿಹಾರ ಮುಗಿಸಿ ಹೋಗುವ ವೃದ್ಧರು, ಮಹಿಳೆಯರಿಗೆ ಬೀದಿ ದೀಪಗಳು ಇಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ತೆರಳುತ್ತಿದ್ದಾರೆ.ಪಟ್ಟಣದ ಪರಿಮಿತಿಯ ೩ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟಿರುವುದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರ ಗಮನಕ್ಕೆ ತಂದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ದುರಸ್ತಿ ಪಡಿಸಿದ ಬಳಿಕ ಬೆಳಕು ಬಂದಿದ್ದನ್ನು ಸ್ಮರಿಸಬಹುದು.
ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಪಟ್ಟಣದ ಜೋಡಿ ರಸ್ತೆಯಲ್ಲಿ ಕೆಟ್ಟು ನಿಂತ ಬೀದಿದೀಪಗಳ ದುರಸ್ತಿಗೆ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಖಡಕ್ ಸೂಚನೆ ನೀಡುವ ಮೂಲಕ ಕೆಟ್ಟು ನಿಂತ ಬೀದಿ ದೀಪಗಳಿಗೆ ಬೆಳಕು ಕೊಡಿಸಲಿ. ಪಟ್ಟಣದಲ್ಲಿ ಕೆಟ್ಟು ನಿಂತ ಬೀದಿ ದೀಪಗಳ ದುರಸ್ತಿ ಜೊತೆಯಲ್ಲಿಯೇ ಬೇಗೂರು ಗ್ರಾಮದ ರಸ್ತೆಯಲ್ಲಿ ಕೆಲ ಲೈಟ್‌ಗಳು ಕೆಟ್ಟು ನಿಂತಿವೆ. ಹೆದ್ದಾರಿಯ ಬೀದಿ ದೀಪಗಳ ದುರಸ್ತಗೆ ಶಾಸಕರು ಮುಂದಾಗಲಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.ಗುಂಡ್ಲುಪೇಟೆ ಜೋಡಿ ರಸ್ತೆಯ ಬೀದಿ ದೀಪ ಈ ಹಿಂದೆ ಕೆಟ್ಟ ಬಳಿಕ ಶಾಸಕರ ಸೂಚನೆ ಮೇರೆಗೆ ಮತ್ತೆ ಬೆಳಕು ಬಂತು. ಇದೀಗ ಮತ್ತೆ ಕೆಟ್ಟು ನಿಂತಿವೆ. ಶಾಸಕರ ಗಮನಕ್ಕೆ ತಂದು ದುರಸ್ತಿ ಪಡಿಸಬೇಕಾದ ಪುರಸಭೆ ಆಡಳಿತ ಮಂಡಳಿ ಜಾಣ ಮೌನ ವಹಿಸಿದೆ. ಇನ್ನಾದರೂ ಕೆಟ್ಟು ನಿಂತ ಬೀದಿ ದೀಪಗಳ ದುರಸ್ತಿ ಪಡಿಸಿ ಜನರಿಗೆ ಬೆಳಕು ನೀಡಲಿ.-ಮಹೇಶ್, ನಾಗರಿಕ, ಗುಂಡ್ಲುಪೇಟೆ