ಗುಂಡ್ಲುಪೇಟೆಯ ಗೃಹ ಮಂಡಳಿ ಬಡಾವಣೇಲಿ ಮೂಲಭೂತ ಸೌಕರ್ಯ ಇಲ್ಲ: ನಿವೇಶನದಾರರ ಆತಂಕ

| Published : Aug 09 2024, 12:32 AM IST

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ಬಳಿಯ ಪಂಜನಹಳ್ಳಿ ಗೃಹ ಮಂಡಳಿಯಿಂದ ಹಂಚಿಕೆಯಾಗಿರುವ ನಿವೇಶನಗಳಿಗೆ ಇ-ಸ್ವತ್ತು ನೀಡುವುದಿಲ್ಲ ಎಂದು ನೇನೇಕಟ್ಟೆ ಗ್ರಾಮ ಪಂಚಾಯಿತಿ ಹಿಂಬರಹ ನೀಡಿರುವುದು ನಿವೇಶನ ಖರೀದಿದಾರರಲ್ಲಿ ಆತಂಕಕ್ಕೀಡು ಮಾಡಿದೆ.

ಇ-ಸ್ವತ್ತು ನೀಡಲ್ಲ ಎಂದು ನೇನೇಕಟ್ಟೆ ಗ್ರಾಪಂ ನಿರ್ಣಯ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಬಳಿಯ ಪಂಜನಹಳ್ಳಿ ಗೃಹ ಮಂಡಳಿಯಿಂದ ಹಂಚಿಕೆಯಾಗಿರುವ ನಿವೇಶನಗಳಿಗೆ ಇ-ಸ್ವತ್ತು ನೀಡುವುದಿಲ್ಲ ಎಂದು ನೇನೇಕಟ್ಟೆ ಗ್ರಾಮ ಪಂಚಾಯಿತಿ ಹಿಂಬರಹ ನೀಡಿರುವುದು ನಿವೇಶನ ಖರೀದಿದಾರರಲ್ಲಿ ಆತಂಕಕ್ಕೀಡು ಮಾಡಿದೆ.

ಗೃಹ ಮಂಡಳಿಯಲ್ಲಿ ನಿವೇಶನ ಖರೀದಿಸಿರುವ ಹಲವರು ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ಸಿಗದ ಕಾರಣ ಇತ್ತೀಚಗೆ ನಿವೇಶನ ಖರೀದಿಸಿದವರಿಗೆ ತೊಂದರೆಯಾಗಿದೆ. ಗೃಹ ಮಂಡಳಿಯಿಂದ ಖಾಸಗಿಯಾಗಿ ನಿವೇಶನ ಖರೀದಿಸಿದವರಿಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಲು ಮೂರು ತಿಂಗಳ ಕಾಲಾವಕಾಶ ನೀಡಿದ್ದು, ಆ ಅವಧಿಯೊಳಗೆ ನೋಂದಾಯಿಸಬೇಕಿದೆ ಎಂದು ನಿವೇಶನ ಖರೀದಿದಾರ ಸ್ವಾಮಿ ಎಂ ಹೇಳಿದ್ದಾರೆ. ಆದರೆ ನೇನೇಕಟ್ಟೆ ಗ್ರಾಮ ಪಂಚಾಯಿತಿ ೨೦೨೪ ಜೂ.೨೦ ರಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದು, ಗೃಹ ಮಂಡಳಿಯಿಂದ ಹಂಚಿಕೆಯಾಗಿರುವ ಬಡಾವಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಒಳ ಚರಂಡಿ, ರಸ್ತೆ, ಬೀದಿ ದೀಪಕ್ಕೆ ವ್ಯವಸ್ಥೆ ಇಲ್ಲದ ಬಗ್ಗೆ ಗೃಹ ಮಂಡಳಿ ಅಧಿಕಾರಿಗೆ ಪತ್ರ ಬರೆಯಲು ನಿರ್ಣಯ ಮಾಡಿದೆ.

ಗೃಹ ಮಂಡಳಿ ಬಡಾವಣೆಯ ೧ ನೇ ಹಂತ,೨ ನೇ ಹಂತ,೩ ನೇ ಹಂತದ ಬಡಾವಣೆಯ ನಿವೇಶನಗಳಿಗೆ ಮುಂದೆ ಹೊಸದಾಗಿ ಇ-ಸ್ವತ್ತು ಮಾಡಿಸಲು ಬರುವ ಸೇಲ್‌ ಡೀಡ್‌ ಪತ್ರಗಳಿಗೆ ಇ-ಸ್ವತ್ತು ಮಾಡದೆ. ವಿಲೇ ಇಡುವುದು ಎಂದೂ ಸಭೆ ತೀರ್ಮಾನಿಸಿದೆ ಎಂದು ಜು.೧೨ ರಂದು ನೇನೇಕಟ್ಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಶಿವಸ್ವಾಮಿ ಹಿಂಬರಹ ನೀಡಿದ್ದಾರೆ.

ನಿವೇಶನ ರಿಜಿಸ್ಟರ್‌ ಮಾಡಿಸಲು ಇ-ಸ್ವತ್ತು ಕೊಡಿ!ಗೃಹ ಮಂಡಳಿಯಲ್ಲಿ ನಿವೇಶನ ಖರೀದಿಸಿದ್ದೇನೆ, ಮೂರು ತಿಂಗಳೊಳಗೆ ನಿವೇಶನ ನೋಂದಾಯಿಸಿಕೊಳ್ಳಿ ಎಂದು ಗೃಹ ಮಂಡಳಿಯ ಸಹಾಯಕ ಕಂದಾಯ ಅಧಿಕಾರಿ ಗಡುವು ನೀಡಿದ್ದಾರೆ. ಹಾಗಾಗಿ ಇ-ಸ್ವತ್ತು ಕೊಡಿ ನಿವೇಶನ ನೋಂದಾಯಿಸಿಕೊಳ್ಳುತ್ತೇನೆ ಎಂದು ನಿವೇಶನ ಖರೀದಿದಾರರೊಬ್ಬರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ನಾನು ಕಳೆದ ಜು.೬ ರಂದು ನಿವೇಶನವನ್ನು ಗೃಹ ಮಂಡಳಿಯಿಂದ ಖರೀದಿಸಿದ್ದೇನೆ. ಮೂರು ತಿಂಗಳೊಳಗೆ ನಿವೇಶನ ಸಬ್‌ ರಿಜಿಸ್ಟರ್‌ ಕಚೇರೀಲಿ ನೋಂದಾಯಿಸಿಕೊಳ್ಳಿ ಎಂದು ಆದೇಶವಿದೆ. ನಾನು ಸದ್ಯಕ್ಕೆ ಮನೆ ಕಟ್ಟಲ್ಲ ಎಂದರು.ಜಿಲ್ಲಾಡಳಿತ ಗಮನಹರಿಸುವುದೇ?ಪಟ್ಟಣದ ಬಳಿ ಪಂಜನಹಳ್ಳಿ ಗೃಹ ಮಂಡಳಿಯ ಬಡಾವಣೆಯಲ್ಲಿ ಮೂಲ ಭೂತ ಸೌಕರ್ಯಗಳಿಲ್ಲದೆ ನಿವೇಶನ ಖರೀದಿಸಿದರಿಗೆ ಇ-ಸ್ವತ್ತು ಸಿಗದೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಖರೀದಿದಾರರ ನೆರವಿಗೆ ದಾವಿಸುವುದೇ?

ಮೂಲಭೂತ ಸೌಕರ್ಯವಿಲ್ಲ ಎಂದು ನೇನೇಕಟ್ಟೆ ಗ್ರಾಮ ಪಂಚಾಯಿತಿ ಇ-ಸ್ವತ್ತು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ನಿವೇಶನ ಖರೀದಿದಾರರಿಗೆ ಗ್ರಾಪಂ ನಿರ್ಣಯದಿಂದ ತೊಂದರೆಯಾಗುತ್ತಿದೆ, ಜಿಲ್ಲಾಡಳಿತ ನಿವೇಶನ ಖರೀದಿಸಿದವರ ನೆರವಿಗೆ ಬರುವುದೇ ಕಾದು ನೋಡಬೇಕಿದೆ. ನನ್ನಂತೆ ಹಲವರು ಗೃಹ ಮಂಡಳಿ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ನಿವೇಶನ ನೋಂದಾಯಿಸಲು ಮೂರು ತಿಂಗಳ ಕಾಲಾವಕಾಶ ನೀಡಿದೆ. ಆದರೆ ನೇನೇಕಟ್ಟೆ ಗ್ರಾಪಂ ಗೃಹ ಮಂಡಳಿ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂದು ಇ-ಸ್ವತ್ತು ನೀಡುತ್ತಿಲ್ಲ. ಇದರಿಂದ ನಿವೇಶನ ಖರೀದಿದಾರರಿಗೆ ತೊಂದರೆಯಾಗಿದೆ. ಗೃಹ ಮಂಡಳಿ ಹಾಗು ಗ್ರಾಮ ಪಂಚಾಯಿತಿ ನಡುವಿನ ಮುಸುಕಿನ ಗುದ್ದಾಟಕ್ಕೆ ಜಿಲ್ಲಾಡಳಿತ ತೆರೆ ಎಳೆಯಲಿ.-ಸ್ವಾಮಿ ಎಂ, ನಿವೇಶನ ಖರೀದಿದಾರ