ಗುಂಡ್ಲುಪೇಟೆ ಜೋಡಿ ರಸ್ತೆ ಮತ್ತೆ ಕಗ್ಗತ್ತಲಲ್ಲಿ!

| Published : Oct 26 2024, 12:45 AM IST

ಸಾರಾಂಶ

ಕಳೆದ ಹಲವು ವರ್ಷಗಳಿಂದ ಪಟ್ಟಣದ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟು ಕಗ್ಗತ್ತಲಲ್ಲಿ ರಸ್ತೆ ಮುಳುಗಿತ್ತು. ಕಳೆದ ಸ್ವಾತಂತ್ರ್ಯೋತ್ಸವ ಸಮಯದಲ್ಲಿ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಜಗಮಗಿಸಿದ್ದವು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಳೆದ ಹಲವು ವರ್ಷಗಳಿಂದ ಪಟ್ಟಣದ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟು ಕಗ್ಗತ್ತಲಲ್ಲಿ ರಸ್ತೆ ಮುಳುಗಿತ್ತು. ಕಳೆದ ಸ್ವಾತಂತ್ರ್ಯೋತ್ಸವ ಸಮಯದಲ್ಲಿ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಜಗಮಗಿಸಿದ್ದವು.

ಈಗ ಮತ್ತೆ, ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟ್ಟಣದ ಜೋಡಿ ರಸ್ತೆಯ ಬೀದಿ ದೀಪಗಳು ಬಹುತೇಕ ಕೆಟ್ಟಿ ನಿಂತಿವೆ. ಕೆಲವು ದೀಪುಗಳು ಬೆಳಕು ಕೊಟ್ಟರೂ ಜೋಡಿ ರಸ್ತೆಯಲ್ಲಿ ಕಗ್ಗತ್ತಲಿನಂತೆ ಮುಳುಗಲು ಶುರು ಮಾಡಿದೆ. ಅಮಾವಾಸ್ಯೆ ಹುಣ್ಣಿಮೆಗೆ ಪಟ್ಟಣದ ಜೋಡಿ ರಸ್ತೆಯ ಬೀದಿ ದೀಪಗಳು ಉರಿಯುತ್ತವೆ ಎಂದು ಪಟ್ಟಣದ ನಾಗರಿಕರು ವ್ಯಂಗ್ಯವಾಗಿ ಹೇಳುತ್ತಿದ್ದು, ತಾಲೂಕು ಆಡಳಿತ ದೀಪಾವಳಿಗೂ ಮುನ್ನ ಕೆಟ್ಟು ನಿಂತ ಬೀದಿ ದೀಪಗಳ ಬೆಳಗಲು ಕ್ರಮ ವಹಿಸಲಿ ಎಂದು ಸಲಹೆ ನೀಡಿದ್ದಾರೆ.

ಪಟ್ಟಣದ ವ್ಯಾಪ್ತಿಯ ಮೈಸೂರು-ಊಟಿ ರಸ್ತೆ, ಊಟಿ ರಸ್ತೆ-ಕೇರಳ ರಸ್ತೆ, ಪ್ರವಾಸಿ ಮಂದಿರದ ಸರ್ಕಲ್‌ನಿಂದ ಶಿವಾನಂದ ಸರ್ಕಲ್‌ ತನಕ ಜೋಡಿ ರಸ್ತೆಯಿದ್ದರೂ ಬೀದಿ ದೀಪಗಳು ಆಗಾಗ್ಗೆ ಕೆಟ್ಟು ಕತ್ತಲಾಗುತ್ತಿವೆ ಎಂದು ಪಟ್ಟಣದ ನಾಗೇಂದ್ರ ದೂರಿದ್ದಾರೆ. ಸ್ವಾತಂತ್ರ್ಯೋತ್ಸವದ ಮುನ್ನ ದಿನ ಪಟ್ಟಣದ ಜೋಡಿ ರಸ್ತೆಯ ಬೀದಿ ದೀಪಗಳು ಶಾಸಕರ ಸೂಚನೆ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆಟ್ಟು ನಿಂತ ಬೀದಿ ದೀಪಗಳನ್ನು ದುರಸ್ತಿಪಡಿಸಿ ಬೆಳಕು ನೀಡಿದ್ದರು. ಇದೀಗ ಮತ್ತೆ ಜೋಡಿ ರಸ್ತೆಯ ಬಹುತೇಕ ಬೀದಿ ದೀಪಗಳು ಕೆಟ್ಟು ನಿಂತ ಕಾರಣ ಜೋಡಿ ರಸ್ತೆಯ ಅಲ್ಲಲ್ಲಿ ಕತ್ತಲಾಗಿದೆ. ಇದರಿಂದ ಪಾದಚಾರಿಗಳು, ಸೈಕಲ್‌ ಸವಾರರು ರಾತ್ರಿ ವೇಳೆ ಸಂಚರಿಸಲು ತೊಂದರೆಯಾಗಿದೆ. ಜೋಡಿ ರಸ್ತೆಯಲ್ಲಿ ಬೀದಿ ದೀಪ ಕೆಟ್ಟು ನಿಂತ ಪ್ರದೇಶದಲ್ಲಿ ಸಂಚರಿಸುವ ವಾಹನಗಳ ಹೆಡ್‌ ಲೈಟ್‌ ಬೆಳಕಿನಲ್ಲಿ ಜನರು ಸಂಚರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಜೋಡಿ ರಸ್ತೆಯಲ್ಲಿ ಬೀದಿದೀಪಗಳು ಕೆಟ್ಟಿರುವ ಬಗ್ಗೆ ದೂರು ಬಂದಿಲ್ಲ. ಕನ್ನಡಪ್ರಭ ಗಮನಕ್ಕೆ ತಂದಿದೆ. ಕೆಟ್ಟು ನಿಂತ ಬೀದಿ ದೀಪಗಳ ನಿರ್ವಹಣೆ ಮಾಡುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಕೆಟ್ಟ ಬೀದಿ ದೀಪಗಳ ನಿರ್ವಹಣೆ ಮಾಡಿಸುವಂತೆ ಎನ್‌ಎಚ್‌ಎಐಗೆ ಹೇಳುತ್ತೇನೆ.ಕೆ.ಪಿ. ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ