ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್ ಬಳಿಯ ಕ್ರಷರ್‌ನಿಂದ ಬರುವ ಟಿಪ್ಪರ್‌ಗಳ ಓಡಾಟದಿಂದ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿವೆ. ಟಿಪ್ಪರ್ ಸಂಚಾರದಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ಧೂಳು ಮೆತ್ತಿಕೊಳ್ಳುತ್ತಿದೆ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಿರೀಕಾಟಿ ಗೇಟ್ ಬಳಿಯ ಕ್ರಷರ್‌ನಿಂದ ಬರುವ ಟಿಪ್ಪರ್‌ಗಳ ಓಡಾಟದಿಂದ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿವೆ. ಟಿಪ್ಪರ್ ಸಂಚಾರದಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ಧೂಳು ಮೆತ್ತಿಕೊಳ್ಳುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದರೂ ಇಲ್ಲಿನ ತನಕ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆರೋಪಿಸಿದ್ದಾರೆ.ಕಳೆದ ಮೇ 30 ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿದೆ. ಆದರೆ ಈ ಭಾಗದ ಭೂ ವಿಜ್ಞಾನಿ ಪುಷ್ಪ ಕ್ರಷರ್ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ. ಓವರ್ ಲೋಡ್ ತುಂಬಿದ ಟಿಪ್ಪರ್‌ಗಳ ಸಂಚಾರದಿಂದ ಹಿರೀಕಾಟಿ ಗೇಟ್‌ನಿಂದ ಕ್ರಷರ್ ತನಕ ರಸ್ತೆ ಹಾಳಾಗಿದೆ. ಟಿಪ್ಪರ್ ಹೋಗುವ ಸ್ಪೀಡಿಗೆ ರಸ್ತೆಯಲ್ಲಿ ಸಂಚರಿಸುವ ಜನರು, ವಿದ್ಯಾರ್ಥಿಗಳು, ಜಾನುವಾರುಗಳಿಗೆ ಧೂಳು ತುಂಬುತ್ತಿದೆ. ಧೂಳಿನಿಂದ ರೋಗ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಹಿರೀಕಾಟಿ ಗೇಟ್ ಎಡ ಭಾಗದಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮಾಡಿಸಿದ್ದ ಸರ್ವೀಸ್ ರಸ್ತೆ ಕೂಡ ಓವರ್ ಲೋಡ್ ಟಿಪ್ಪರ್ ಓಡಾಟದಿಂದ ಗುಂಡಿಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದಿದ್ದಾರೆ. ಕ್ರಷರ್ ಮಾಲೀಕರಿಗೆ ಸೇರಿದ ಜಾಗ ರಸ್ತೆಯ ಪಕ್ಕದಲ್ಲಿದೆ ಆ ರಸ್ತೆಯಲ್ಲಿ ಟಿಪ್ಪರ್ ಸಂಚರಿಸುತ್ತಿಲ್ಲ. ಕ್ರಷರ್ ಮಾಲೀಕರ ಜಮೀನಿನ ಮೂಲಕ ಮೈಸೂರು-ಊಟಿ ಹೆದ್ದಾರಿಗೆ ಹೋಗಲಿ ಎಂದು ಸಲಹೆ ನೀಡಿದ್ದಾರೆ.
ಬೇಗೂರು ಭಾಗದ ಭೂ ವಿಜ್ಞಾನಿ ಪುಷ್ಪ ಸರ್ಕಾರಕ್ಕೆ ಆದಾಯ ತರುವ ಕೆಲಸ ಮಾಡುತ್ತಿಲ್ಲ. ಕ್ರಷರ್ ಮಾಲೀಕರೊಂದಿಗೆ ಶಾಮೀಲಾಗಿ ಓವರ್ ಲೋಡ್ ಕಲ್ಲು ಹಾಗೂ ಪರ್ಮಿಟ್, ಎಂಡಿಪಿ ಇಲ್ಲದೆ ಸಂಚರಿಸುವ ಟಿಪ್ಪರ್ ಹಿಡಿದು ದಂಡ ಹಾಕುತ್ತಿಲ್ಲ ಎಂದು ದೂರಿದ್ದಾರೆ.