ಗುಂಡ್ಲುಪೇಟೆಯ ಪುರಸಭೆ ಅಧಿಕಾರಕ್ಕೆ ಹಾಲಿ, ಮಾಜಿ ಶಾಸಕರಿಗೆ ಪ್ರತಿಷ್ಠೆ

| Published : Aug 10 2024, 01:33 AM IST

ಸಾರಾಂಶ

ಗುಂಡ್ಲುಪೇಟೆಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಗೊಂಡಿದ್ದು, ಪುರಸಭೆ ಗುದ್ದುಗೆಯ ವಿಚಾರ ಹಾಲಿ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌, ಮಾಜಿ ಶಾಸಕ ಸಿ.ಎಸ್. ನಿರಂಜನ್‌ಕುಮಾರ್‌ಗೆ ಪ್ರತಿಷ್ಠೆಯ ಕಣವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಗೊಂಡಿದ್ದು, ಪುರಸಭೆ ಗುದ್ದುಗೆಯ ವಿಚಾರ ಹಾಲಿ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌, ಮಾಜಿ ಶಾಸಕ ಸಿ.ಎಸ್. ನಿರಂಜನ್‌ಕುಮಾರ್‌ಗೆ ಪ್ರತಿಷ್ಠೆಯ ಕಣವಾಗಿದೆ.

ಪುರಸಭೆಯ ಚುನಾವಣೆ 2019ರಲ್ಲಿ ನಡೆದಾಗ ಒಟ್ಟು 23 ಸದಸ್ಯರಲ್ಲಿ ಬಿಜೆಪಿ 13 ಮಂದಿ, ಕಾಂಗ್ರೆಸ್‌ 8, ಓರ್ವ ಎಸ್‌ಡಿಪಿಐ, ಓರ್ವ ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದು, ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಪುರಸಭೆ ಚುನಾವಣೆ ಬಳಿಕ ಬಿಜೆಪಿಯ 13 ಮಂದಿ ಸದಸ್ಯರ ಜೊತೆಗೆ ಪಕ್ಷೇತರ ಸದಸ್ಯ ಪಿ.ಶಶಿಧರ್‌ (ದೀಪು) ಕೂಡ ಬಿಜೆಪಿಗೆ ಬೆಂಬಲ ನೀಡಿದಾಗ 13 ಸದಸ್ಯರ ಬದಲಾಗಿ 14 ಸದಸ್ಯರಾದ ಬಳಿಕ ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಪಿ.ಗಿರೀಶ್‌, ಉಪಾಧ್ಯಕ್ಷರಾಗಿ ದೀಪಿಕಾ ಅಶ್ವಿನ್‌ ಗೆಲುವು ಸಾಧಿಸಿ ತಮ್ಮ ಅವಧಿ ಪೂರ್ಣಗೊಳಿಸಿದರು.

ಈಗ ಮತ್ತೆ ಮೀಸಲು ನಿಗದಿಪಡಿಸಿದ್ದು, ಅಧ್ಯಕ್ಷ ಸ್ಥಾನ ಬಿಸಿಎಂ (ಬಿ) ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಹೊರ ಬಿದ್ದಿದ್ದು, ಈಗ ಬಿಜೆಪಿ ಸದಸ್ಯ ರಮೇಶ್‌ ಹಾಗೂ ಪಕ್ಷೇತರ ಸದಸ್ಯ ಪಿ.ಶಶಿಧರ್‌ (ದೀಪು) ಬಿಜೆಪಿಯಿಂದ ದೂರವಾಗಿರುವ ಕಾರಣ ಬಿಜೆಪಿ ಸದಸ್ಯರ ಸಂಖ್ಯೆ 12 ಕ್ಕೆ ಇಳಿದಿದೆ.

ಕಾಂಗ್ರೆಸ್‌ ಏರಿಕೆ: ಪುರಸಭೆಯಲ್ಲಿ ಕಾಂಗ್ರೆಸ್‌ 8 ಸದಸ್ಯರ ಜೊತೆಗೆ ಶಾಸಕ, ಸಂಸದ ಮತ ಸೇರಿದರೆ 10 ಮತವಾಗಲಿದೆ. ಜೊತೆಗೆ ಎಸ್‌ಡಿಪಿಐ ಸದಸ್ಯ ರಾಜಗೋಪಾಲ್‌ ಬೆಂಬಲ ಬಹುತೇಕ ಕಾಂಗ್ರೆಸ್‌ ಖಚಿತವಾಗಿದ್ದು 11 ಮತವಾಗಲಿವೆ. ಬಿಜೆಪಿಯಿಂದ ದೂರ ಉಳಿದ ಪುರಸಭೆ ಸದಸ್ಯ ರಮೇಶ್‌ ಕಾಂಗ್ರೆಸ್‌ ಓಟು ಸೇರಿದರೆ 12 ಸದಸ್ಯರ ಬಲವಾಗಲಿದೆ.

ಆದರೆ ಬಿಜೆಪಿ ಚಿಹ್ನೆಯಲ್ಲಿ ಗೆದ್ದ ಪುರಸಭೆ ಸದಸ್ಯ ರಮೇಶ್‌ ಕಾಂಗ್ರೆಸ್‌ಗೆ ಮತ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡ ಬರಲಿದೆ. ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ಸದಸ್ಯೆ ಹೊಸೂರಿನ ರಾಣಿ ಲಕ್ಷ್ಮೀದೇವಿ ಬಿಜೆಪಿಯಿಂದ ಅಂತರ ಕಾಯ್ದು ಕೊಂಡಿದ್ದಾರೆ. ಆದರೆ ರಾಣಿಲಕ್ಷ್ಮೀ ದೇವಿ ಹಾಗೂ ರಮೇಶ್‌ ಕಾಂಗ್ರೆಸ್‌ ಪರ ಕೈಜೋಡಿಸಿದರೆ, ಕಾಂಗ್ರೆಸ್‌ಗೆ ಪುರಸಭೆ ಅಧಿಕಾರ ಸಿಗಲಿದೆ ಆದರೆ ಪಕ್ಷಾಂತರ ಮಾಡಿದವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಗತ್ತಿಯಂತೂ ಇದೆ.

ಇಬ್ಬರಿಗೂ ಡಿಮ್ಯಾಂಡ್‌:

ಪಕ್ಷೇತರ ಸದಸ್ಯ ಪಿ.ಶಶಿಧರ್‌ (ದೀಪು) ಬಿಸಿಎಂ (ಬಿ) ವರ್ಗಕ್ಕೆ ಸೇರಿದ್ದು, ಇವರು ಕೂಡ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದು, ಅಧ್ಯಕ್ಷ ಸ್ಥಾನ ಬೇಕು ಎಂಬ ಆಸೆಯನ್ನು ಎರಡು ಪಕ್ಷದವರಿಗೂ ಹೇಳಿಕೊಂಡಿದ್ದಾರೆ. ಇನ್ನೂ ಎಸ್‌ಡಿಪಿಐನ ಏಕೈಕ ಸದಸ್ಯ ರಾಜಗೋಪಾಲ್‌ ಬೆಂಬಲ ಬಹುತೇಕ ಕಾಂಗ್ರೆಸ್ಸಿಗೆ ಇದೆ ಎನ್ನಲಾಗುತ್ತಿದ್ದು, ಆದರೆ ಉಪಾಧ್ಯಕ್ಷ ಸ್ಥಾನದ ಮೇಲೆ ಆಸೆ ಪಟ್ಟಿದ್ದಾರೆ

ಪ್ರತಿಷ್ಠೆಯ ಪ್ರಶ್ನೆ:

ಸಿ.ಎಸ್. ನಿರಂಜನ್‌ ಕುಮಾರ್‌ ಶಾಸಕರಾಗಿದ್ದಾಗ ಪುರಸಭೆಯ ಅಧಿಕಾರ ಬಿಜೆಪಿಗೆ ಸಿಕ್ಕಿತ್ತು. ಬದಲಾದ ರಾಜಕಾರಣದಲ್ಲಿ ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾಗಿದ್ದು, ಗಣೇಶ್‌ ಪ್ರಸಾದ್‌ ರಿಗೂ ಪುರಸಭೆ ಅಧಿಕಾರ ಹಿಡಿಯಬೇಕು ಎಂಬ ಮನಸ್ಸು ಇದೆ. ಬಿಜೆಪಿಗೆ ಇರುವ 13 ಮಂದಿ ಸದಸ್ಯರ ಒಗ್ಗಟ್ಟು ಇದೆ, ಬಿಜೆಪಿಯವರೇ ಅಧಿಕಾರ ಹಿಡಿಯುತ್ತೇವೆಂದು ವಿಶ್ವಾಸದಲ್ಲಿದ್ದರೂ, ಕಾಂಗ್ರೆಸ್‌ಗೆ ಬಿಜೆಪಿ ಸದಸ್ಯರೇ ಹೊರ ಬಂದು ಕೈ ಹಿಡಿಯಲಿದ್ದಾರೆ ಎಂದು ಕೊಂಡಿದ್ದಾರೆ. ಹಾಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ಗೆ ಪುರಸಭೆ ಅಧಿಕಾರ ದಕ್ಕಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಂತೂ ಇದ್ದೇ ಇದೆ.