ಪುರಸಭೆ ಅಧಿಕಾರಕ್ಕಾಗಿ ಪಕ್ಷೇತರ ಸದಸ್ಯರಿಗೆ ಬಿಜೆಪಿ ಮಣೆ!

| Published : Aug 30 2024, 01:08 AM IST

ಸಾರಾಂಶ

ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪುಗೆ ಬಿಜೆಪಿ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪುಗೆ ಬಿಜೆಪಿ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ)ಗೆ ಮೀಸಲಾಗಿದ್ದು, ಪುರಸಭೆ ಬಿಜೆಪಿ ಸದಸ್ಯರಾದ ನಾಗೇಶ್‌ ಹಾಗೂ ಕಿರಣ್‌ ಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಸದಸ್ಯರಿದ್ದರೂ ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪುಗೆ ಬಿಜೆಪಿ ಸದಸ್ಯರೊಬ್ಬರ ಮುನಿಸಿನಿಂದಾಗಿ ಪುರಸಭೆ ಅಧ್ಯಕ್ಷರಾಗುವ ಅವಕಾಶ ಬಂದಿದೆ. ಪುರಸಭೆ ಒಟ್ಟು ೨೩ ಬಲದಲ್ಲಿ ಬಿಜೆಪಿ ೧೩ ಸದಸ್ಯರಲ್ಲಿ ಬಿಜೆಪಿ ಸದಸ್ಯ ರಮೇಶ್‌ ಬಿಜೆಪಿ ಪಕ್ಷದಲ್ಲಾದ ಬೆಳವಣಿಗೆಗೆ ಬೇಸತ್ತು ಬಿಜೆಪಿಯಿಂದ ದೂರ ಸರಿದಿದ್ದಾರೆ. ಮತ್ತೋರ್ವ ಸದಸ್ಯೆ ರಾಣಿ ಲಕ್ಷ್ಮೀ ದೇವಿ ಕೂಡ ಬಿಜೆಪಿಯಿಂದ ಮುನಿಸಿಕೊಂಡು ದೂರವಿದ್ದರು.

ಪುರಸಭೆ ಅಧಿಕಾರ ಹಿಡಿಯಲು ೧೩ ಮ್ಯಾಜಿಕ್‌ ನಂಬರ್!‌ ೧೩ ಸದಸ್ಯರಲ್ಲಿ ಇಬ್ಬರು ಸದಸ್ಯರ ಮುನಿಸಿನಿಂದ ಬಿಜೆಪಿ ಸದಸ್ಯರಾದ ನಾಗೇಶ್‌, ಕಿರಣ್‌ ಗೌಡ ಅಧ್ಯಕ್ಷರಾಗಲು ಇಬ್ಬರು ಸದಸ್ಯರ ಬೆಂಬಲ ಅಧಿಕಾರ ಹಿಡಿಯಲು ಬೇಕು. ಬಿಜೆಪಿ ಸದಸ್ಯರಿಗೆ ಅಧ್ಯಕ್ಷರಾಗುವ ಅವಕಾಶ ಇದ್ದರೂ ಅಧಿಕಾರ ಹಿಡಿಯಲು ಇಬ್ಬರು ಸದಸ್ಯರ ಕೊರತೆಯಿಂದ ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪು ಹಾಗೂ ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿ ಅವರ ಪತಿ ಪುರಸಭೆ ಮಾಜಿ ಸದಸ್ಯ ಬಸವರಾಜು ಮನವೊಲಿಸಿದ ಬಿಜೆಪಿ ಸದಸ್ಯರು ಪುರಸಭೆಯಲ್ಲಿ ಅಧಿಕಾರ ಮುಖ್ಯ ಎಂದು ಪಕ್ಷೇತರ ಸದಸ್ಯರೊಬ್ಬರಿಗೆ ಮಣೆ ಹಾಕಿದ್ದಾರೆ.

ಪುರಸಭೆ ಬಿಜೆಪಿ ಸದಸ್ಯ ರಮೇಶ್‌ ಕಾಂಗ್ರೆಸ್‌ಗೆ ಬೆಂಬಲಿಸುವ ಸಾಧ್ಯತೆ ಹೆಚ್ಚಿತ್ತು. ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪು ಹಾಗೂ ರಾಣಿ ಲಕ್ಷ್ಮೀ ದೇವಿ ಬಿಜೆಪಿ ಜೊತೆ ಮತ್ತೆ ಗುರುತಿಸಿಕೊಂಡ ಹಿನ್ನೆಲೆ ಬಿಜೆಪಿ ಸದಸ್ಯರ ನಡೆ ಕೂಡ ಈಗ ಕುತೂಹಲ ಮೂಡಿದೆ.

ಒಳ ಒಪ್ಪಂದ, ಅಧ್ಯಕ್ಷ ಸ್ಥಾನ ಮೂರು ಭಾಗ!

ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮೀಸಲಾಗಿದ್ದು, ಬಿಜೆಪಿಯ ಪುರಸಭೆ ಸದಸ್ಯ ನಾಗೇಶ್‌ ಹಾಗೂ ಕಿರಣ್‌ ಗೌಡರ ನಡುವೆ ಪೈಪೋಟಿ ಇತ್ತು. ಬಹುಮತದ ಕೊರತೆ ಹಿನ್ನೆಲೆ ಮೊದಲು ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪುಗೆ ಕೆಲ ತಿಂಗಳು ಕೊಟ್ಟ ಬಳಿಕ ಉಳಿದ ಅವಧಿಯಲ್ಲಿ ಕಿರಣ್‌ ಗೌಡ ಹಾಗೂ ನಾಗೇಶ್‌ ಅಧ್ಯಕ್ಷರಾಗಲು ಒಪ್ಪಂದ, ಆಣೆ, ಪ್ರಮಾಣ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿ ಸದಸ್ಯರಾದ ನಾಗೇಶ್‌ ಹಾಗೂ ಕಿರಣ್‌ ಗೌಡರೇ ಅಧ್ಯಕ್ಷರಾಗುವ ಅವಕಾಶಕ್ಕೆ ಬಿಜೆಪಿ ಸದಸ್ಯರ ಬಂಡಾಯ ಮುಳ್ಳಾಗಿ ಪರಿಣಮಿಸಿದ್ದು, ಪುರಸಭೆ ಅಧಿಕಾರಕ್ಕಾಗಿ ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪುಗೆ ಬಿಜೆಪಿ ಸದಸ್ಯರು ಮಣೆ ಹಾಕಿದ್ದಾರೆ.

ಕನ್ನಡಪ್ರಭದಲ್ಲಿ ಮಾತ್ರ! ಪುರಸಭೆ ಅಧ್ಯಕ್ಷ ಗಾದಿಗೆ ಪಕ್ಷೇತರ ಸದಸ್ಯ ದೀಪು ಹೆಸರು ಮುಂಚೂಣಿಯಲ್ಲಿ ಎಂದು ಕನ್ನಡಪ್ರಭ ಆ.೨೫ ರ ವರದಿ ನಿಜವಾಗಿದೆ. ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ನಾಗೇಶ್‌ ಪ್ರಬಲ ಆಕಾಂಕ್ಷಿಗಳಾದರೂ ಬಹುಮತದ ಕೊರತೆ ಬಿಜೆಪಿ ಇರುವ ಕಾರಣ ಅಧ್ಯಕ್ಷಗಾದಿಗೆ ಪಕ್ಷೇತರ ಸದಸ್ಯ ಪಿ.ಶಶಿಧರ್‌ ದೀಪು ಹೆಸರು ಬಿಜೆಪಿಯಲ್ಲಿದೆ ಎಂದು ಕನ್ನಡಪ್ರಭ ವಿಶ್ಲೇಷಣೆ ಮಾಡಿ ವರದಿ ಪ್ರಕಟಿಸಿತ್ತು.