ಸಾರಾಂಶ
ಮೃತ ವಿದ್ಯಾರ್ಥಿ ತಂದೆ ನಾಗರಾಜು ಕಳೆದ ವರ್ಷ ಸಾವನ್ನಪ್ಪಿದ್ದರು. ತಾಯಿ ರತ್ನಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಇದ್ದೊಬ್ಬ ಮಗನನ್ನು ಕಳೆದುಕೊಂಡು ರತ್ನಮ್ಮರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಗುಂಡ್ಲುಪೇಟೆ: ಪಟ್ಟಣದ ಕುರುಬಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೪ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ನಿವಾಸಿ ರತ್ಮಮ್ಮರ ಪುತ್ರ ೧೦ ವರ್ಷದ ಮನೋಜ್ ಕುಮಾರ್ ಶಾಲೆಯಲ್ಲಿದ್ದಾಗ ಕುಸಿದು ಬಿದ್ದಿದ್ದಾನೆ. ಶಿಕ್ಷಕರು ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮೃತ ವಿದ್ಯಾರ್ಥಿ ಮನೋಜ್ ಕುಮಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಮೃತ ಮನೋಜ್ ಕುಮಾರ್ ಮೂಲತಃ ತಾಲೂಕಿನ ದೊಡ್ಡಹುಂಡಿ ಗ್ರಾಮದಲ್ಲಿ ೧ ಮತ್ತು ೨ ನೇ ತರಗತಿ ಓದಿದ್ದ, ೩ ನೇ ತರಗತಿಗೆ ಪಟ್ಟಣದ ಕುರುಬಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ್ದ. ಮೃತ ವಿದ್ಯಾರ್ಥಿ ತಂದೆ ನಾಗರಾಜು ಕಳೆದ ವರ್ಷ ಸಾವನ್ನಪ್ಪಿದ್ದರು. ತಾಯಿ ರತ್ನಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಇದ್ದೊಬ್ಬ ಮಗನನ್ನು ಕಳೆದುಕೊಂಡು ರತ್ನಮ್ಮರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಚಾಮರಾಜನಗರ ಸಿಮ್ಸ್ ನಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಮೃತನ ತಾಯಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ ಮನೋಜ್ ಕುಮಾರ್ ತಾಯಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಸಾಂತ್ವನ ಹೇಳಿ ಧೈರ್ಯ ತುಂಬಿದರು.