ಗುಂಡ್ಲುಪೇಟೆ ಪಟ್ಟಣದಲ್ಲಿ ಕಳೆದ ೪೮ ದಿನಗಳಿಂದ ನಡೆಯುತ್ತಿರುವ ರೈತಸಂಘದ ಅಹೋರಾತ್ರಿ ಹೋರಾಟಕ್ಕೆ ತಾಲೂಕು ಮತ್ತು ಜಿಲ್ಲಾಡಳಿತ ಸ್ಪಂದಿಸದಿರುವುದನ್ನು ಖಂಡಿಸಿ ಅ.೧೨ ರ ಸೋಮವಾರ ಪಟ್ಟಣದಲ್ಲಿ ತಮಟೆ ಚಳವಳಿ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಪಟ್ಟಣದಲ್ಲಿ ಕಳೆದ ೪೮ ದಿನಗಳಿಂದ ನಡೆಯುತ್ತಿರುವ ರೈತಸಂಘದ ಅಹೋರಾತ್ರಿ ಹೋರಾಟಕ್ಕೆ ತಾಲೂಕು ಮತ್ತು ಜಿಲ್ಲಾಡಳಿತ ಸ್ಪಂದಿಸದಿರುವುದನ್ನು ಖಂಡಿಸಿ ಅ.೧೨ ರ ಸೋಮವಾರ ಪಟ್ಟಣದಲ್ಲಿ ತಮಟೆ ಚಳವಳಿ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.

ಪಟ್ಟಣದಲ್ಲಿ ಕಳೆದ ೪೮ ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೫ ದಿನದ ಹಿಂದೆ ಸಫಾರಿ ಕೇಂದ್ರದ ಮುಂದೆ ರೈತಸಂಘದ ನಡೆಸಿದ ಹೋರಾಟದಲ್ಲಿ ಅ.೧೦ ರೊಳಗೆ ತಹಸೀಲ್ದಾರ್ ಲಾಗಿನ್‌ನಲ್ಲಿರುವ ರೈತರ ಹಕ್ಕುಪತ್ರ, ಸಾಗುವಳಿ ಫೈಲ್‌ಗಳಿಗೆ ಎನ್‌ಒಸಿ ನೀಡಿ ಕ್ಲಿಯರ್ ಎಂದು ಅರಣ್ಯ ಇಲಾಖೆ ಎಸಿಎಫ್‌ ಭರವಸೆ ನೀಡಿದ್ದರು. ಆದರೆ ಇಂದಿನವರೆಗೂ ಒಂದು ಫೈಲ್ ಬಂದಿಲ್ಲ ಎಂದು ಆರೋಪಿಸಿದರು.

ಬೆಳವಾಡಿ ಗ್ರಾಮದ ಸರ್ವೆ ನಂ.20 ರ 279 ಎಕರೆಯಲ್ಲಿ 1991ರಲ್ಲಿ 9 ಜನರಿಗೆ ಸಾಗುವಳಿ ವಿತರಣೆಯಾಗಿತ್ತು. 2002ರಲ್ಲಿ 178 ಎಕರೆ ಪರಿಭಾವಿತ ಅರಣ್ಯ,87 ಎಕರೆ ಗೋಮಾಳ ಎಂದು ಏಕಾಏಕಿ ನೋಟಿಫಿಕೇಶನ್ ಮಾಡಿ, 70 ವರ್ಷದಿಂದ ಉಳುಮೆ ಮಾಡುತ್ತಿರುವ ರೈತರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ತಡೆ ನೀಡುತ್ತಿರುವುದು ಖಂಡನೀಯ ಎಂದರು.

ಸರ್ಕಾರ ಪ್ರತಿ ಜಿಲ್ಲೆಗೆ ೫೦ ಸಾವಿರ ನಿವೇಶನ ಗುರುತು ಮಾಡುವ ಹೆಸರಿನಲ್ಲಿ ಗೋಮಾಳ ಕಬಳಿಸುತ್ತಿದೆ. ಗೋಮಾಳದಲ್ಲಿ 250 ಎಕರೆ ಇದ್ದರೂ 100 ಎಕರೆ ಬೇಕು ಎಂದು ಎಲ್ಲವನ್ನೂ ಗೋಮಾಳವೆಂದು ತೋರಿಸಿ, ಉಳುಮೆ ಮಾಡುತ್ತಿರುವ ರೈತರನ್ನು ಎತ್ತಂಗಡಿ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಭಾಗದ ಕೆರೆಗಳಿಗೆ ಮಾತ್ರ ನೀರು ತುಂಬಿಸಿ ತಾರತಮ್ಯ ಮಾಡುತ್ತಿದ್ದಾರೆ. ಕೆರೆಗಳ ನೀರು ತುಂಬಿಸುವ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಸೋಮವಾರ 50ನೇ ದಿನಕ್ಕೆ ಪ್ರತಿಭಟನೆ ಕಾಲಿಡುವ ಅಂಗವಾಗಿ ತಾಲೂಕು ಕಚೇರಿ ಮುಂದೆ ತಮಟಾ ಚಳವಳಿ ನಡೆಸಲಾಗುವುದು ಎಂದರು.

ರೈತರ ಹೋರಾಟಕ್ಕೂ ಬಗ್ಗದಿದ್ದರೆ ಅತೀ ಶೀಘ್ರದಲ್ಲೆ ಪಟ್ಟಣಧಲ್ಲಿ ಬೃಹತ್ ರೈತ ಸಮಾವೇಶ ನಡೆಲಾಗುತ್ತದೆ ಅಲ್ಲದೆ ಅ.೧೭ರಿಂದ ಎನ್‌ಒಸಿ ಸಿಗುವವರೆಗೂ ಬಂಡೀಪುರ ಸಫಾರಿ ಬಂದ್ ಚಳುವಳಿ ಮಾಡಲಾಗುವುದು ಎಂದರು.

ತಕ್ಕ ಪಾಠ ಖಚಿತ:

ಮುಂಬರುವ ಜಿಪಂ,ತಾಪಂ ಚುನಾವಣೆಯಲ್ಲಿ ರೈತ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಗುಡುಗಿದರು.

ತಾಲೂಕು ರೈತಸಂಘದ ಅಧ್ಯಕ್ಷ ಶಿವಣ್ಣ,ಮುಖಂಡರಾದ ಪ್ರಸಾದ್,ಹಕ್ಕಲಪುರ ಕುಮಾರ್, ಮಾಧುಸ್ವಾಮಿ ಸೇರಿ ಹಲವರು ಇದ್ದರು.