ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಧರ್ಮಸ್ಥಳ ಮೂಲದ ವಿದ್ಯಾರ್ಥಿನಿ ಆಕಾಂಕ್ಷ ನಿಗೂಢ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸುವುದಾಗಿ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.ಆಕಾಂಕ್ಷ ಪಂಜಾಬ್‌ನಲ್ಲಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಇದೊಂದು ಅಸಹಜ ಸಾವು ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಉಪನ್ಯಾಸಕ ಮ್ಯಾಥ್ಯೂ ಕಿರುಕುಳದಿಂದ ಆಕಾಂಕ್ಷ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬ ವರ್ಗದವರು ಆರೋಪಿಸಿದ್ದಾರೆ. ಪ್ರಕರಣದ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಿದ್ದೇನೆ. ಪಂಜಾಬ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕಾಂಕ್ಷ ಮೃತದೇಹವನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಆಕಾಂಕ್ಷ ನಿಗೂಢ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಚರ್ಚೆ ನಡೆಸಿದ್ದಾರೆ. ಪಂಜಾಬ್‌ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಾಂಕ್ಷ ಅವರ ಕುಟುಂಬದ ಬೆಂಬಲಕ್ಕೆ ರಾಜ್ಯ ಸರ್ಕಾರ ನಿಲ್ಲಲಿದ್ದು, ಸರ್ಕಾರದಿಂದ ಅಗತ್ಯ ಸಹಕಾರ ಕಲ್ಪಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಅಸ್ವಸ್ಥ ತಾಯಿ ಆಸ್ಪತ್ರೆಗೆ ದಾಖಲು:
ಪಂಜಾಬ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಧರ್ಮಸ್ಥಳ ಬೊಳಿಯಾರ್ ನಿವಾಸಿ ಆಕಾಂಕ್ಷ ತಾಯಿ ಸಿಂಧೂದೇವಿ ಮಗಳ ಸಾವಿನ ಆಘಾತದಿಂದ ಅಸ್ವಸ್ಥರಾಗಿದ್ದು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದ ಆಕಾಂಕ್ಷ ಎಸ್ ನಾಯರ್ (22) ಪಂಜಾಬ್ ನಲ್ಲಿ ಕಾಲೇಜ್ ಕಟ್ಟಡದಿಂದ ಮೇ 17 ರಂದು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತಕ್ಷಣ ತಂದೆ-ತಾಯಿ ಹಾಗೂ ಕುಟುಂಬದವರು ಪಂಜಾಬ್ ರಾಜ್ಯದ ಜಲಂಧರ್ ತಾಲೂಕಿನ ಪಗ್ವಾರ ಪೊಲೀಸ್ ಠಾಣೆ ಮತ್ತು ಮೃತದೇಹ ಇದ್ದ ಆಸ್ಪತ್ರೆಗೆ ಹೋಗಿದ್ದರು.ಅಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿದ್ದು. ಮೃತದೇಹನ್ನು ಧರ್ಮಸ್ಥಳ ಬೊಳಿಯರ್ ಮನೆಗೆ ತರಲಾಗುತ್ತಿದೆ. ತಾಯಿ ಸಿಂಧೂದೇವಿ ಸೋಮವಾರವೇ ಪಂಜಾಬ್ ನಿಂದ ಬೊಳಿಯರ್ ಮನೆಗೆ ವಾಪಸ್ ಅಗಿದ್ದು ಮಗಳ ಸಾವಿನ ನೋವಿನಿಂದ ಊಟ ಮಾಡದೆ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.