ಸಾರಾಂಶ
ಬ್ರಿಟಿಷರ ಆಡಳಿತದ ಕಾಲದಲ್ಲಿ ನಿರ್ಮಾಣವಾಗಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿಯ ಹಳೆ ತಾಲೂಕು ಕಚೇರಿ ಕಟ್ಟಡ ಈಗ ಕುಡುಕರ ತಾಣವಾಗಿದೆ.
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿರುವ ಹಾಗೂ ಬ್ರಿಟಿಷರ ಆಡಳಿತದ ಕಾಲದಲ್ಲಿ ನಿರ್ಮಾಣವಾಗಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿಯ ಹಳೆ ತಾಲೂಕು ಕಚೇರಿ ಕಟ್ಟಡ ಈಗ ಕುಡುಕರ ತಾಣವಾಗಿದೆ.ಸುಮಾರು ವರ್ಷಗಳ ಹಿಂದೆ ಇಲ್ಲಿಯೇ ತಹಶೀಲ್ದಾರ, ಉಪವಿಭಾಗಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದರು. ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿ, ಸರ್ವೆ ಕಚೇರಿ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರವಾದ ನಂತರ ಇಲ್ಲಿಯ ಕೆಲವೊಂದು ಕೋಣೆಗಳಲ್ಲಿ ಸುಮಾರು ವರ್ಷಗಳಿಂದ ಕೇವಲ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕರು, ಪಟ್ಟಣದ ಗ್ರಾಮ ಲೆಕ್ಕಿಗರು ಮತ್ತು ಆಧಾರ್ ನೋಂದಣಿ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಕಟ್ಟಡದ ಆವರಣದಲ್ಲಿ ಅಂದರೆ 10 ಮೀಟರ್ ದೂರದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಹ ಕಾರ್ಯ ನಿರ್ವಹಿಸುತ್ತಲಿದೆ. ಆದರೆ ಇಲ್ಲಿಯ ಕೋಣೆಗಳ ಬಾಗಿಲು ಬಳಿ ಪ್ರತಿದಿನ ರಾತ್ರಿ ಮದ್ಯಪಾನ ಪಾರ್ಟಿ ಜೋರಾಗಿ ನಡೆಯುತ್ತವೆ. ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬಂದರೆ ಮದ್ಯದ ಬಾಟಲ್‌ಗಳು, ಕುರ್‌ಕುರೆ ಖಾಲಿ ಪ್ಯಾಕೇಟ್‌ಗಳು, ನೀರಿನ ಬಾಟಲ್, ಕಸ ಕಡ್ಡಿ ತುಂಬಿರುತ್ತದೆ. ಮಲ-ಮೂತ್ರ ಸಹ ಆಗಾಗ ಕಾಣಿಸುತ್ತದೆ. ಇತರ ಅನೈತಿಕ ಚಟುವಟಿಕೆಗಳು ಸಹ ನಡೆಯುತ್ತವೆ ಎಂದು ಕಂಡ ಜನರು ಹೇಳುತ್ತಾರೆ.ಪ್ರತಿದಿನ ಕಂದಾಯ ಸಿಬ್ಬಂದಿ ಬೆಳಗ್ಗೆ ಬಂದ ಕೂಡಲೇ ಮೂಗು ಮುಚ್ಚಿಕೊಂಡು ತಾವೇ ಸ್ವಚ್ಛತಾ ಕಾರ್ಯ ಮಾಡಿಕೊಂಡು ಬೀಗ ತೆಗೆದು ಒಳಗೆ ಹೋಗಿ ಕೂತು ಕೆಲಸ ಮಾಡಬೇಕು. ಇದು ಪ್ರತಿ ನಿತ್ಯ ಸರ್ಕಾರಿ ಕೆಲಸದ ಜೊತೆ ಹೆಚ್ಚುವರಿ ಕೆಲಸ ಮಾಡಬೇಕಿದೆ.
ಇದರಿಂದ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಮುಖ್ಯ ಗೇಟ್‌ಗಳಿಗೆ ಬೀಗ ಹಾಕಿಸಿ, ನಿಗಾ ಇಡಬೇಕು. ಮದ್ಯ ಸೇವನೆ ಸೇರಿದಂತೆ ಇತರ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ಇಲ್ಲವೇ ಈ ಬಗ್ಗೆ ಪೊಲೀಸರಿಗೆ ಕಂದಾಯ ಇಲಾಖೆಯಿಂದ ದೂರಾದರೂ ನೀಡಿ ಬ್ರಿಟಿಷರ ಕಾಲದ ಸುಂದರ ಕಟ್ಟಡವನ್ನು ಹೊಲಸು ಮುಕ್ತಗೊಳಿಸಬೇಕು. ಇಲ್ಲಿ ಕೆಲಸ ಮಾಡುವ ಸ್ವಲ್ಪ ಮಟ್ಟಿನ ಕಂದಾಯ ಸಿಬ್ಬಂದಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ.ಪಟ್ಟಣದ ಹಳೆ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ನಮ್ಮ ಗಮನಕ್ಕೆ ಬಂದಿಲ್ಲ. ಗಮನ ಹರಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುತ್ತೇನೆ ಎನ್ನುತ್ತಾರೆ ತಹಶೀಲ್ದಾರ್ ಬಿ.ವಿ.ಗಿರೀಶಬಾಬು.
ಇಲ್ಲಿಯ ಹಳೆ ತಹಶೀಲ್ದಾರ ಕಚೇರಿ ಕಟ್ಟಡದ ಆವರಣದಲ್ಲಿ ದಿನ ನಿತ್ಯ ರಾತ್ರಿ ಮದ್ಯಪಾನ ಮಾಡಿ ಬಾಟಲ್, ಕಸ ಕಡ್ಡಿ ಎಸೆದು ಹೋಗುತ್ತಾರೆ. ನಮಗೆ ಪ್ರತಿದಿನ ಬೆಳಿಗ್ಗೆ ಹಿಂಸೆ ಆಗುತ್ತದೆ. ಮೇಲಧಿಕಾರಿಗಳು ಗಮನ ಹರಿಸಿ ಇದರಿಂದ ಮುಕ್ತ ಮಾಡಬೇಕು ಎನ್ನುತ್ತಾರೆ ಹೆಸರು ಹೇಳಚ್ಚಿಸದ ಕಂದಾಯ ಸಿಬ್ಬಂದಿ.;Resize=(128,128))
;Resize=(128,128))
;Resize=(128,128))
;Resize=(128,128))