ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು: ರೌಡಿಶೀಟರ್‌ಗೆ ಗುಂಡೇಟು

| Published : Apr 09 2025, 02:01 AM IST

ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು: ರೌಡಿಶೀಟರ್‌ಗೆ ಗುಂಡೇಟು
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್‌ ಕಾಲಿಗೆ ಗುಂಡೇಟು ಹಾಕಿ ಬಂಧಿಸಿರುವ ಘಟನೆ ಹಳೇಹುಬ್ಬಳ್ಳಿಯ ರಾಘವೇಂದ್ರ ಕಾಲನಿ ಸ್ಮಶಾನ ಬಳಿ ಮಂಗಳವಾರ ನಡೆದಿದೆ.

ಹುಬ್ಬಳ್ಳಿ: ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್‌ ಕಾಲಿಗೆ ಗುಂಡೇಟು ಹಾಕಿ ಬಂಧಿಸಿರುವ ಘಟನೆ ಹಳೇಹುಬ್ಬಳ್ಳಿಯ ರಾಘವೇಂದ್ರ ಕಾಲನಿ ಸ್ಮಶಾನ ಬಳಿ ಮಂಗಳವಾರ ನಡೆದಿದೆ.

ಇಲ್ಲಿಯ ಹೆಗ್ಗೇರಿ ನಿವಾಸಿ ಮಲ್ಲಿಕ್‌ ಅದೋನಿ ಎಂಬಾತನೇ ಪೊಲೀಸರ ಗುಂಡೇಟು ತಿಂದ ಆರೋಪಿ.

ಈ ಘಟನೆಯಲ್ಲಿ ಪಿಎಸ್‌ಐ ವಿಶ್ವನಾಥ ಆಲದಮಟ್ಟಿ ಹಾಗೂ ಸಿಬ್ಬಂದಿ ಶರೀಫ ನದಾಫ್‌ಗೆ ಗಾಯಗಳಾಗಿದ್ದು, ಮೂವರನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಕೆಎಂಸಿಆರ್‌ಐಗೆ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ ಭೇಟಿ ನೀಡಿ, ಸಿಬ್ಬಂದಿ ಆರೋಗ್ಯ ವಿಚಾರಿಸಿದರು.

ಸುದ್ದಿಗಾರರಿಗೆ ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ, ಆರೋಪಿ ಮಲ್ಲಿಕ್‌ ಜನ್ನತ್‌ ನಗರದ ತೆಂಗಿನಕಾಯಿ ವ್ಯಾಪಾರಿ ಇರ್ಫಾನ್‌ ಸುಂಕದ ಅವರಿಂದ ₹4 ಲಕ್ಷ ಸಾಲ ಪಡೆದಿದ್ದನು. ಇದರಲ್ಲಿ ಸ್ವಲ್ಪ ಹಣವನ್ನು ವಾಪಸ್‌ ಕೂಡ ನೀಡಿದ್ದ. ಉಳಿದ ಹಣ ಕೇಳಲು ಇರ್ಫಾನ್‌ ಸೋಮವಾರ ಸಂಜೆ ಹೆಗ್ಗೇರಿ ಬಳಿ ಹೋದಾಗ ಒಂಬತ್ತು ಮಂದಿಯ ಗುಂಪು, ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿತ್ತು. ಅಲ್ಲದೇ, ಆರೋಪಿ ಮಲ್ಲಿಕ್‌ ಅವರ ಎಡಗೈಗೆ ಮೂರು ಬಾರಿ ಚಾಕು ಇರಿದಿದ್ದ. ಮತ್ತೊಬ್ಬ ಆರೋಪಿ ವಾಸೀಮ್‌ ತಲ್ವಾರನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋಮವಾರ ರಾತ್ರಿಯೇ ಆರೋಪಿ ಮಲ್ಲಿಕ್‌ನನ್ನು ಬಂಧಿಸಿದ್ದರು. ಉಳಿದ ಆರೋಪಿಗಳು ರಾಘವೇಂದ್ರ ಕಾಲನಿ ಸ್ಮಶಾನದ ಬಳಿ ಇದ್ದಾರೆ ಎಂದು ಆರೋಪಿ ಮಲ್ಲಿಕ್‌ ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು, ಮಲ್ಲಿಕ್‌ ಜತೆಗೆ ಅಲ್ಲಿಗೆ ತೆರಳಿದ್ದರು. ಆಗ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಹೆದರದೇ, ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಆತನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಕಮಿಷನರ್‌ ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್‌., ಎಸಿಪಿ ಶಿವಪ್ರಕಾಶ ನಾಯ್ಕ, ಹಳೇಹುಬ್ಬಳ್ಳಿ ಠಾಣೆ ಪಿಐ ಮಲ್ಲಿಕಾರ್ಜುನ ಸಿಂಧೂರ ಇದ್ದರು.