ಸಾರಾಂಶ
ಶಾಲಾ ಆಸ್ತಿ ನೋಂದಣಿ ಅಭಿಯಾನದಡಿ ಸ್ವಯಂ ಪ್ರೇರಣೆಯಿಂದ ಕೊಡುಗೆಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಅಭಿಯಾನದಡಿ ತಾಲೂಕಿನ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೂ ದಾನ ಮಾಡಿದ ಆಸ್ತಿ ಮಾಲೀಕರು ಸ್ವಯಂ ಪ್ರೇರಣೆಯಿಂದ ಮುಂದೆ ದಾನ ಪತ್ರದ ಮೂಲಕ ಶಿಕ್ಷಣ ಇಲಾಖೆಗೆ ಆಸ್ತಿ ನೋಂದಣಿ ಮಾಡಿಸಿ ಜಿಲ್ಲೆಗೆ ಮಾದರಿಯಾಗಿದ್ದಾರೆ.ಹೌದು, ತಾಲೂಕಿನ ಮಾಗಳ ಗ್ರಾಮದ ಗುಂಜಾಳ ಭೋಜರಾಜಪ್ಪ ಸಾಹುಕಾರ ಕಳೆದ 75 ವರ್ಷಗಳ ಹಿಂದೆ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಗ್ರಾಮ ಠಾಣಾಕ್ಕೆ ಹೊಂದಿಕೊಂಡ 1 ಎಕರೆ ಭೂಮಿ ದಾನವಾಗಿ ನೀಡಿದ್ದರು. ಕೆಲ ಕಾರಣಾಂತರಗಳಿಂದ ಈವರೆಗೂ ಆಸ್ತಿ ಶಿಕ್ಷಣ ಇಲಾಖೆಗೆ ನೋಂದಣಿಯಾಗಿರಲಿಲ್ಲ. ಅವರ ಪುತ್ರ ಗುಂಜಾಳ ಬುಜಬಲಿ ಸಾಹುಕಾರ್ ತಾವೇ ಸ್ವಯಂ ಪ್ರೇರಣೆಯಿಂದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು, ದಾನ ಪತ್ರದ ಮೂಲಕ ನೋಂದಣಿ ಮಾಡಿಸಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದಾನ ಪತ್ರ ನೀಡಿದ್ದಾರೆ.
ಇಲಾಖೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಮಾತನಾಡಿದ ಭೂದಾನಿ ಗುಂಜಾಳ ಬುಜಬಲಿ ಸಾಹುಕಾರ, ಸರ್ಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಭೂ ದಾನ ಮಾಡಿದ ಭೂಮಿಯನ್ನು ಬಡ ಮಕ್ಕಳ ಶಿಕ್ಷಣ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಿ, ಶೈಕ್ಷಣಿಕ ಕ್ಷೇತ್ರಕ್ಕೆ ಇನ್ನು ಹೆಚ್ಚಿನ ಸಹಕಾರ ನೀಡುವ ಮನಸ್ಸುಗಳ ಸಂಖ್ಯೆ ಹೆಚ್ಚಾಗಬೇಕಿದೆ. ಆದರೆ ಯಾವುದೇ ಕಾರಣಕ್ಕೂ ತಿರಸ್ಕಾರದ ಮನೋಭಾವನೆ ಸರಿಯಲ್ಲ ಎಂದರು.ಬಿಇಒ ಮಹೇಶ ಪೂಜಾರ್ ಮಾತನಾಡಿ, ಸರ್ಕಾರ ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಅಭಿಯಾನ ಹಮ್ಮಿಕೊಂಡಿದೆ. ತಾಲೂಕಿನಲ್ಲಿ 37 ಸರ್ಕಾರಿ ಶಾಲೆಗಳ ಆಸ್ತಿಗಳು ಇನ್ನು ರೈತರ ಹೆಸರಿನಲ್ಲಿವೆ. ಇದರಲ್ಲಿ ಮಾಗಳದ ಗುಂಜಾಳ ಬುಜಬಲಿ ಸಾಹುಕಾರ ತಾವೇ ಮುಂದೆ ಬಂದು 1 ಎಕರೆ ಭೂಮಿಯನ್ನು ನೋಂದಣಿ ಮಾಡಿಸಿರುವುದು ಉತ್ತಮ ಬೆಳವಣಿಗೆ, ಇವರು ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದರು.
ಬಡ ಮಕ್ಕಳ ಶಿಕ್ಷಣಕ್ಕೆ ಒತ್ತಾಸೆಯಾಗಿ ನಿಂತು ಎಲ್ಲರೂ ಕೆಲಸ ಮಾಡಬೇಕಿದೆ. ಮಾಗಳ ಗ್ರಾಮ ಇಡೀ ಜಿಲ್ಲೆಯಲ್ಲಿ ಮಾದರಿ ಗ್ರಾಮವಾಗಿದ್ದು, ಈ ಸರ್ಕಾರಿ ಶಾಲೆಯಲ್ಲಿ 680ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕ್ಷರ ಕಲಿಯುತ್ತಿದ್ದಾರೆ ಎಂದರು.ಈ ಸಂದರ್ಭ ತೋಟರ ಮಲ್ಲಿಕಾರ್ಜುನಪ್ಪ, ಗ್ರಾಪಂ ಉಪಾಧ್ಯಕ್ಷ ಯಳಮಾಲಿ ವಿರೂಪಾಕ್ಷಪ್ಪ, ನಿವೃತ್ತ ಶಿಕ್ಷಣ ಎಂ.ಶಾಂತರಾಜ, ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಜಗದೀಶ, ಬಿಆರ್‌ಸಿ ಎ.ಕೋಟೆಪ್ಪ, ಶಾಲಾ ಮುಖ್ಯ ಶಿಕ್ಷಕ ಡಿ.ವಿರೂಪಣ್ಣ ಮಾತನಾಡಿದರು.
ಕೆ.ಸತ್ಯನಾರಾಯಣ ರೆಡ್ಡಿ, ಬಸ್ತಿ ಭರತೇಶ, ಎ.ಜಯಕೀರ್ತಿ, ಎ.ಯಶೋಧರಗೌಡ, ಎಲ್.ಮಂಜುನಾಥ, ತೋಟರ ಹಾಲೇಶ, ಕವಸರ ಯಲ್ಲಪ್ಪ, ರಂಗಾಪುರ ನಾಗೇಶ, ನಿವೃತ್ತ ಶಿಕ್ಷಕ ಎಂ.ಜಯಣ್ಣ, ಎಂ.ವೀರಣ್ಣ, ಈಟಿ ಕೃಷ್ಣಪ್ಪ, ಮಾದೇಶ್ವರ ಸೇರಿದಂತೆ ಇತರರಿದ್ದರು.