ಬಳ್ಳಾರಿಯಲ್ಲಿ ಈ ಹಿಂದೆ ಖಾಸಗಿ ಗನ್‌ಮ್ಯಾನ್‌ಗಳ ಸಂಸ್ಕೃತಿ ಇರಲಿಲ್ಲ. ಫ್ಲೆಕ್ಸ್‌ ಸಂಸ್ಕೃತಿ ಇರಲಿಲ್ಲ.

ಬಳ್ಳಾರಿ: ಬಳ್ಳಾರಿಯಲ್ಲಿ ಈ ಹಿಂದೆ ಖಾಸಗಿ ಗನ್‌ಮ್ಯಾನ್‌ಗಳ ಸಂಸ್ಕೃತಿ ಇರಲಿಲ್ಲ. ಫ್ಲೆಕ್ಸ್‌ ಸಂಸ್ಕೃತಿ ಇರಲಿಲ್ಲ. ಅದನ್ನು ಶುರು ಮಾಡಿದ್ದೇ ಗಾಲಿ ಜನಾರ್ದನ ರೆಡ್ಡಿ. ಆತನೇ ಬಳ್ಳಾರಿ ಗಬ್ಬೆದ್ದು ಹೋಗಲು ಪ್ರಮುಖ ಕಾರಣ ಎಂದು ಮಾಜಿ ಬುಡಾ ಅಧ್ಯಕ್ಷ ಹಾಗೂ ಶಾಸಕ ನಾರಾ ಭರತ್ ರೆಡ್ಡಿ ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಳ್ಳಾರಿಯಲ್ಲಿ ಗನ್‌ಮ್ಯಾನ್ ಸಂಸ್ಕೃತಿ ಶುರುವಾಯಿತು. ಈ ಹಿಂದೆ ಎಂ.ಪಿ. ಪ್ರಕಾಶ್, ಎಂ.ವೈ. ಘೋರ್ಪಡೆ, ಅಲ್ಲಂ ವೀರಭದ್ರಪ್ಪ ಸೇರಿದಂತೆ ಯಾವ ಹಿರಿಯ ನಾಯಕರು ಸಹ ಹತ್ತಾರು ಗನ್‌ಮ್ಯಾನ್‌ಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲಿಲ್ಲ. ಜನಾರ್ದನ ರೆಡ್ಡಿ ರಾಜಕೀಯ ಮುನ್ನೆಲೆಗೆ ಬರುತ್ತಿದ್ದಂತೆಯೇ ಅನೇಕ ಜನವಿರೋಧಿ ಕಾರ್ಯಗಳು, ದೌರ್ಜನ್ಯಗಳು ಆರಂಭಗೊಂಡವು. ಅಕ್ರಮ ಗಣಿಗಾರಿಕೆಗಳು ನಡೆದವು. ಇದು ಇಡೀ ಬಳ್ಳಾರಿ ಜಿಲ್ಲೆಯ ಜನರಿಗೆ ಗೊತ್ತಿದೆ. ಯಾರಿಗೆ ಸಂಸ್ಕೃತಿ ಇಲ್ಲ. ಯಾರಿಗೆ ಸಂಸ್ಕಾರ ಇಲ್ಲ ಎಂಬುದನ್ನು ಈಗಾಗಲೇ ಬಳ್ಳಾರಿ ಜನ ನೋಡಿದ್ದಾರೆ ಎಂದರು.

ಬಳ್ಳಾರಿ ರಾಯಲ್ ಸರ್ಕಲ್‌ನಲ್ಲಿದ್ದ ಐತಿಹಾಸಿಕ ಗಡಗಿ ಚನ್ನಪ್ಪ ಗಡಿಯಾರ ಗೋಪುರ ಒಡೆದು ಹಾಕಿದ್ದು ಯಾರು? ಸುಗ್ಗಲಮ್ಮ ದೇವಸ್ಥಾನವನ್ನು ರಾತ್ರೋರಾತ್ರಿ ಧ್ವಂಸ ಮಾಡಿದ್ದು ಯಾರು? ಎಂಬುದನ್ನು ಈ ಜಿಲ್ಲೆಯ ಜನರು ಮರೆತಿಲ್ಲ. ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಲು ಜನಾರ್ದನ ರೆಡ್ಡಿಯೇ ಕಾರಣ. ಬ್ಯಾನರ್‌ ಹಾಕುವ ವಿಚಾರವನ್ನು ದೊಡ್ಡದು ಮಾಡಿ ಗಲಭೆ ಸೃಷ್ಟಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಅನಾವರಣಗೊಳಿಸುವುದನ್ನು ಸಹಿಸಲಾಗದೇ ಈ ಕೃತ್ಯ ಎಸಗಿದ್ದಾರೆ. ನಾರಾ ಕುಟುಂಬಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ. ಜನಾರ್ದನ ರೆಡ್ಡಿ ಡ್ರಾಮಾ ಕಂಪನಿ ಬಂದ್ ಮಾಡಬೇಕು. ಬಿಜೆಪಿಯವರಿಗೆ ನಿಜಕ್ಕೂ ಜಿಲ್ಲೆಯ ಬಗ್ಗೆ ಅಭಿಮಾನವಿದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಎನ್‌ಎಂಡಿಸಿ ಪ್ಲಾಂಟ್ ಸ್ಥಾಪನೆಗೆ ಮುಂದಾಗಲಿ. ಕೈಗಾರಿಕಾ ಸ್ಥಾಪನೆ ಮಾಡುವುದಾಗಿ ತಮ್ಮ ಪುತ್ರಿ ಬ್ರಹ್ಮಿಣಿ ಹೆಸರಿನಲ್ಲಿ ರೈತರಿಂದ ಭೂಮಿ ಖರೀದಿಸಿ ಈಗ ಉತ್ತಮ್‌ ಗಾಲ್ವ್‌ ಕಂಪನಿಗೆ ಮಾರಾಟ ಮಾಡಿದ್ದಾರೆ. ನೈತಿಕತೆ ಇದ್ದರೆ ಭೂಮಿ ವಾಪಸ್ ಪಡೆದು ಕೈಗಾರಿಕೆ ಸ್ಥಾಪಿಸಿ, ಯುವಕರಿಗೆ ಉದ್ಯೋಗ ಸೃಷ್ಟಿಸಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಗಾದೆಪ್ಪ, ಕಾಂಗ್ರೆಸ್ ಮುಖಂಡರಾದ ಎ.ಮಾನಯ್ಯ, ಮುಂಡರಗಿ ನಾಗರಾಜ್, ಎಲ್.ಮಾರೆಣ್ಣ, ಜಗನ್, ರಾಮ್ ಪ್ರಸಾದ್, ವೆಂಕಟೇಶ್ ಹೆಗಡೆ, ಕೆರಕೋಡಪ್ಪ, ವಿ.ಕೆ. ಬಸಪ್ಪ, ಎಚ್‌.ಸಿದ್ದೇಶ್ ಇದ್ದರು.