ಸಾರಾಂಶ
ನಗರದ ಲೋಕೋಪಯೋಗಿ ಇಲಾಖೆ ನಿರೀಕ್ಷಣಾ ಗೃಹದಲ್ಲಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ನಡುವೆ ಆಂತರಿಕ ಮಾತುಕತೆ ನಡೆದಿದೆ ಎಂಬ ವದಂತಿ ಹಬ್ಬಿದೆ.
ಶಿರಸಿ: ನಗರದ ಲೋಕೋಪಯೋಗಿ ಇಲಾಖೆ ನಿರೀಕ್ಷಣಾ ಗೃಹದಲ್ಲಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ನಡುವೆ ಆಂತರಿಕ ಮಾತುಕತೆ ನಡೆದಿದೆ ಎಂಬ ವದಂತಿ ಹಬ್ಬಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ಕೌತುಕಕ್ಕೆ ಕಾರಣವಾಗಿದೆ.ಹೌದು, ಪಕ್ಷದ ಮೂಲಗಳ ಪ್ರಕಾರ ಮಂಗಳವಾರ ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು. ನೂತನ ಜಿಲ್ಲಾಧ್ಯಕ್ಷರ ಆಯ್ಕೆಯಾದ ಬಳಿಕ ಪಕ್ಷದ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ಹಂಚುವ, ಪಕ್ಷ ಸಂಘಟನೆಗೆ ಚರ್ಚಿಸುವ ಸಲುವಾಗಿ ಈ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಗೆ ಅನಂತಕುಮಾರ ಹೆಗಡೆ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಿದ್ದಾರೆ. ಈ ವೇಳೆ ಇಬ್ಬರೂ ಗೌಪ್ಯವಾಗಿ ಮಾತುಕತೆ ನಡೆಸಿದರು ಎನ್ನಲಾಗುತ್ತಿದೆ.
ಈ ಇಬ್ಬರೂ ಎದುರಾದರೆ ಆತ್ಮೀಯರಂತೆ ಮಾತುಕತೆ ನಡೆಸುತ್ತಾರಾದರೂ ಒಳಗಿನ ಶೀತಲ ಸಮರ ನಡೆದೇ ಇರುತ್ತದೆ. ಒಂದು ಮೂಲಗಳ ಪ್ರಕಾರ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದ ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯರಾಗಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಕಾರಣ. ಈ ಬಾರಿ ಅನಂತಕುಮಾರ ಸ್ಪರ್ಧಿಸುವ ಸಾಧ್ಯತೆ ಇಲ್ಲದಿರುವುದರಿಂದ ಕಾಗೇರಿ ಅವರ ಹೆಸರು ಲೋಕಸಭಾ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬಂದಿತ್ತು. ಇದರಿಂದ ಜಾಗ್ರತರಾದ ಅನಂತಕುಮಾರ ತನಗೆ ಟಿಕೆಟ್ ನೀಡಬೇಕು ಇಲ್ಲವೇ ತಾನು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಆಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.ಈಗ ಕೋರ್ ಕಮಿಟಿ ಸಭೆಯಲ್ಲಿ ಈ ಇಬ್ಬರೂ ಎದುರಾಗಿದ್ದು, ಮಾತುಕತೆ ನಡೆಸಿದ್ದಾರೆ.
ಅರ್ಧಕ್ಕೆ ಹೊರ ಬಂದ ಕಾಗೇರಿ?: ಜಿಲ್ಲಾ ಬಿಜೆಪಿ ಪ್ರಮುಖರಾದ ಉಷಾ ಹೆಗಡೆ, ಚಂದ್ರು ಎಸಳೆ ಹಾಗೂ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ವಿಶ್ವೇಶ್ವರ ಹೆಗಡೆ ಸಭೆ ಪೂರ್ಣಗೊಳ್ಳುವ ಮೊದಲೇ ಹೊರಬಂದರುರೆ ಎನ್ನಲಾಗಿದೆ.