Gurmatkal: Illegal rice transportation, case registered

-ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 26.00 ಕ್ವಿಂಟಲ್ ಅಕ್ಕಿ ಪತ್ತೆ

--

ಕನ್ನಡಪ್ರಭ ವಾರ್ತೆ ಯಾದಗಿರಿಗುರುಮಠಕಲ್ ತಾಲೂಕಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಣೆಯಾಗುವ ಅಕ್ಕಿಯನ್ನು ಅಕ್ರಮವಾಗಿ ಕಳ್ಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಭೇದಿಸಿದ್ದಾರೆ.

ಗುರುಮಠಕಲ್ ಸೀಮಾಂತರದಲ್ಲಿರುವ ನರಸರೆಡ್ಡಿ ತಂದೆ ಭೀಮರೆಡ್ಡಿ ಉಟ್ಕೂರ ಇವರ ಹೊಲದ ಹತ್ತಿರ, ಗುರುಮಠಕಲ್-ಗಾಜರಕೋಟ್ ಮುಖ್ಯ ರಸ್ತೆಯ ಬದಿಯಲ್ಲಿ ವಾಹನವೊಂದರಲ್ಲಿ ಅಕ್ಕಿ ಲೋಡ್ ಮಾಡಿ ನಿಲ್ಲಿಸಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕರು ಹಾಗೂ ಪೊಲೀಸರು ಪರಿಶೀಲನೆ ನಡೆಸಿದಾಗ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ (ಸಂಖ್ಯೆ: ಟಿಎಸ್-07-ಯುಕೆ -1440) ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 26.00 ಕ್ವಿಂಟಲ್ ಅಕ್ಕಿ ಪತ್ತೆಯಾಗಿದೆ. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ ₹60,320 ಹಾಗೂ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನದ ಅಂದಾಜು ಮೌಲ್ಯ ₹ 2,50,000 ಆಗಿದೆ.

ಈ ಸಂಬಂಧ ದಿನಾಂಕ:05-10-2026 ರಂದು ವಾಹನ ಚಾಲಕನ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ರಡಿ ಪ್ರಕರಣ (ಪ್ರಕರಣ ಸಂಖ್ಯೆ: 209/2026) ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

-

ಫೋಟೊ: 6ವೈಡಿಆರ್2

ಗುರುಮಠಕಲ್ ತಾಲೂಕಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಣೆಯಾಗುವ ಅಕ್ಕಿಯನ್ನು ಅಕ್ರಮವಾಗಿ ಕಳ್ಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಪ್ರಕರಣವನ್ನು ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಭೇದಿಸಿದ್ದಾರೆ.