ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುರುವಾರ ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಭಾಗವಹಿಸಿ ಕಲಶಪೂಜೆ ಕಲಶಾಭಿಷೇಕ ಸೇವೆ ಸಹಿತ ಪಲ್ಲಕ್ಕಿ ಉತ್ಸವ, ತೊಟ್ಟಿಲು ಪೂಜೆಗಳಲ್ಲಿ ಭಾಗವಹಿಸಿದರು. ಉಡುಪಿಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ ಅವರೂ ಭಾವಹಿಸಿದ್ದರು.
ಉಡುಪಿಯ ಉದ್ಯಮಿ ಡಾ.ಜಿ. ಶಂಕರ್ ಅವರೂ ಗುರುವಾರ ರಾಮದೇವರಿಗೆ ಕಲಶ ಸೇವೆಯಲ್ಲಿ ಭಾಗವಹಿಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಶಾಸಕ ಗುರ್ಮೆ ಮತ್ತು ಶಂಕರ್ ಅವರಿಗೆ ರಜತ ಕಲಶಪ್ರಸಾದ ನೀಡಿ ಅನುಗ್ರಹಿಸಿದರು. ಸುನಿಲ್ ಕುಮಾರ್ ಅವರ ಕಲಶ ಸೇವೆ ಶುಕ್ರವಾರ ನಡೆಯಲಿದೆ.* ರಾಮನಿಗೆ ಕರ್ನಾಟಕದ ಹೂವಿನಲಂಕಾರಅಯೋಧ್ಯೆಯಲ್ಲಿ ಒಳ್ಳೆಯ ಹೂಗಳು ಸಿಗುವುದು ವಿರಳ. ಆದರೂ ಪ್ರತಿಷ್ಠಾಪನೆಯ ನಂತರ ಈ ದಿನದವರೆಗೂ ಬಾಲರಾಮನಿಗೆ ನಿತ್ಯವೂ ಹೂವಿನ ಅಲಂಕಾರ ಮಾಡಲಾಗುತ್ತಿದೆ. ಅದಕ್ಕೆ ಕರ್ನಾಟಕದಿಂದಲೇ ಹೂವಿನ ಪೂರೈಕೆ ಆಗುತ್ತಿದೆ.ಬಹುತೇಕ ಉಡುಪಿಯ ಶಂಕರಪುರದ ಮಲ್ಲಿಗೆ, ಅಡಕೆ ಸಿಂಗಾರ, ತುಳಸಿ ಮಾಲೆ, ರೆಂಜ (ಬಕುಳ)ಗಳ ಜೊತೆಗೆ, ಬೆಂಗಳೂರು, ಮೈಸೂರು ಮೊದಲಾದೆಡೆಗಳಿಂದ ಆಗಮಿಸುವ ಭಕ್ತರ ಮೂಲಕ ಸೇವಂತಿಗೆ, ಕಾಕಡ, ಸುಗಂಧ ಪುಷ್ಪ ಮೊದಲಾದ ವಿವಿಧ ಜಾತಿಯ ಬೃಹತ್ ಗಾತ್ರದ ಹೂಮಾಲೆಗಳನ್ನು ಪೇಜಾವರ ಶ್ರೀಗಳು ತರಿಸಿ ಅರ್ಚಕರ ಮೂಲಕ ಸುಂದರ ಅಲಂಕಾರವನ್ನು ಮಾಡಿಸುತ್ತಿದ್ದಾರೆ.ಈ ಆಕರ್ಷಕ ಹೂವಿನ ಮಾಲೆಗಳನ್ನು ಕಂಡು ಮಂದಿರದ ಅರ್ಚಕರು, ಭದ್ರತಾ ಅಧಿಕಾರಿಗಳು, ಸಿಬ್ಬಂದಿ ಆಶ್ಚರ್ಯ ಮತ್ತು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಶ್ರೀಗಳ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ವಾಸುದೇವ ಭಟ್ ತಿಳಿಸಿದ್ದಾರೆ.