ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ಹುಟ್ಟು ಉಚಿತ, ಸಾವು ಖಚಿತವಾಗಿರುವ ಬದುಕಿನಲ್ಲಿ ಭಗವಂತ ಕರುಣಿಸಿರುವ ಜೀವನಕ್ಕೆ ಅರ್ಥ ಬರಬೇಕಾದರೆ ಜೀವನದಲ್ಲಿ ಸಮಾಜೋಪಯೋಗಿ, ಮಾನವೀಯ, ಜಗಮೆಚ್ಚುವ ಮೌಲ್ಯಯುತ ಕಾರ್ಯಗಳನ್ನು ಮಾಡಬೇಕಾಗಿರುವುದು ಅತ್ಯವಶ್ಯ.ಈ ನಿಟ್ಟಿನಲ್ಲಿ ಉತ್ತಮ ವಿಧಾಯಕ ಕೆಲಸಗಳನ್ನು ಮಾಡುತ್ತ ಭಕ್ತರ, ಸಹೃದಯಿಗಳ, ವಿದ್ಯಾರ್ಥಿಗಳ ಹೃದಯದಲ್ಲಿ ಮನೆ ಮಾತಾಗಿರುವವರು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು.
ಗುರುಬಸವ ಪಟ್ಟದ್ದೇವರು ಮಠಕೆ ಪೀಠಾಧಿಪತಿಯಾಗಿ ಕೇವಲ ಕುರ್ಚಿಗೆ ಅಂಟಿಕೊಳ್ಳದೆ, ಭಕ್ತರ ದರುಶನಕ್ಕೆ ಮಾತ್ರ ತಮ್ಮನ್ನು ತಾವು ಮೀಸಲಿರಿಸಿಕೊಳ್ಳದೆ. ಪಾದರಸದಂತೆ ಚಲನಶೀಲವಾಗಿ ಸಮಾಜದ ಸರ್ವತೋಮುಖ ಏಳಿಗೆಗೆ ತಮ್ಮ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಮಾನವೀಯ ಕಾರ್ಯಗಳ ಮೂಲಕ ಸಮಾಜದಲ್ಲಿ ಧನಾತ್ಮಕ ಆಮೂಲಾಗ್ರ ಬದಲಾವಣೆಯನ್ನು ತರಲು ಹಗಲಿರಲು ಶ್ರಮಿಸುತ್ತಿರುವುದು. ಎಲ್ಲರಿಗೆ ಕಣ್ಣಿಗೆ ಕಾಣುವ ವಿಷಯವೇ ಆಗಿದೆ.ಅವರ ಸರಳ, ಸಹಜ, ಹಮ್ಮುಬಿಮ್ಮು ಇಲ್ಲದ ಆಕರ್ಷಕ ವ್ಯಕ್ತಿತ್ವ. ಆತ್ಮೀಯ ನುಡಿಗಳು, ಅವರು ಭಕ್ತರನ್ನು ಕಾಣುವ ದೃಷ್ಟಿ, ಆದಿರಾತಿಥ್ಯ ಎಂಥವರನ್ನು ಕೂಡ ಅವರತ್ತ ಸೆಳೆ ಯುವಂತೆ ಮಾಡುತ್ತದೆ. ಶ್ರೀ ಮಠಕ್ಕೆ ಬರುವ ಕಿರಿಯ ವಯಸ್ಕರಿಂದ ಹಿಡಿದು ಹಿರಿಯ ವಯಸ್ಸಿನವರಿಗೆ ಎಲ್ಲರನ್ನೂ ತುಂಬಾ ಪ್ರೀತಿಯಿಂದ ಮಾತನಾಡುತ್ತ ಅವರ ಕಷ್ಟ ಸುಖ ಗಳನ್ನು ಶಾಂತ ಚಿತ್ತದಿಂದ ಆಲಿಸುತ್ತಾ ನೊಂದವರ ಬದುಕಿನಲ್ಲಿ ಭರವಸೆಯ ಬೀಜವನ್ನು ಬಿತ್ತುತ್ತ ಭಕ್ತರನ್ನು ನೋಡಿಕೊಳ್ಳುವ ಪರಿ ಅಭಿಮಾನ ಹುಟ್ಟಿಸುವಂತದ್ದು.
ದೇಶದ ಬೆನ್ನೆಲುಬು ಆಗಿರುವ ಯುವಶಕ್ತಿಯ ಬಗ್ಗೆ ಅವರಿಗಿರುವ ಕಾಳಜಿ ಅನನ್ಯ ಹಾಗಾಗಿಯೇ ಅವರು ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಸಂಚರಿಸಿ ದುರ್ಗುಣದ ಭಿಕ್ಷೆ, ಸದ್ಗುಣದ ದಿಕ್ಷೆ ಕಾರ್ಯಕ್ರಮದ ಮೂಲಕ ತಂಬಾಕು, ಬಿಡಿ, ಸಿಗರೇಟ್ ಸೇವನೆ, ಮದ್ಯ ಸೇವನೆ ಸೇರಿದಂತೆ ಇನ್ನಿತರ ಜೀವನಕ್ಕೆ ಮಾರಕವಾಗಿರುವ ದುಶ್ಚಟಗಳಿಂದ ಯುವಕರು ಮುಕ್ತ ಗೊಳಿಸಲು ಶ್ರಮಿಸುತ್ತಾ ಯುವಕರ, ಹಿರಿಯರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿರುವುದು ತುಂಬಾ ಶ್ಲಾಘನೀಯ ಸಮಾಜಪರ, ಜೀವಪರ ಕಳಕಳಿಯ ಕಾರ್ಯ ಆಗಿದೆ.ಅವರ ಈ ಮಹೋನ್ನತ ಮಾನವೀಯ ಕಾರ್ಯವನ್ನು ಪರಿಗಣಿಸಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ 2020-21ನೇ ಸಾಲಿನ ಸಂಯಮ ಪ್ರಶಸ್ತಿ ನೀಡಿ ಗೌರವಿಸಿದೆ. ಆ ಮೂಲಕ ಈ ಪ್ರಶಸ್ತಿಯ ಘನತೆಯೂ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಶೈಕ್ಷಣಿಕ ಕ್ರಾಂತಿಯ ರೂವಾರಿಗಳು ಆಗಿರುವ ನಾಡೋಜ ಡಾ.ಬಸವಲಿಂಗ ಪಟ್ಟದ್ದವರ ಕರ ಸಂಜಾತರಾಗಿರುವ ಇವರಿಗೆ ಶಿಕ್ಷಣದ ಬಗ್ಗೆ ಇನ್ನಿಲ್ಲದ ಪ್ರೀತಿ. ತಮ್ಮ ಬಿಡುವಿನ ಬಹುತೇಕ ಸಮಯವನ್ನು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಶ್ರೀ ಚನ್ನಬಸವೇಶ್ವರ ಗುರುಕುಲ ಶಾಲೆ, ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಶೈಕ್ಷಣಿಕ ವಿಷಯಗಳ ಕುರಿತು ಚಿಂತನ ಮಂಥನದಲ್ಲಿ ಕಳೆಯುತ್ತಾರೆ.
ನಾಡೋಜ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರ ಉದಾತ್ತ ಶೈಕ್ಷಣಿಕ ಚಿಂತನೆ, ದೂರದೃಷ್ಟಿ, ಗುರುಬಸವ ಪಟ್ಟದ್ದೇವರ ಕ್ರಿಯಾಶೀಲ ಮಾರ್ಗದರ್ಶನ, ಎಲ್ಲಾ ಉಪನ್ಯಾಸಕ, ಶಿಕ್ಷಕ ವೃಂದದವರ ಪ್ರಯತ್ನದ ಫಲವಾಗಿ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ, ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಾ ಹೆತ್ತವರ ಕನಸನ್ನು ನನಸಾಗಿಸಿ ರಾಷ್ಟ್ರದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇತ್ತೀಚೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುಕುಲ ಪಿಯು ಕಾಲೇಜಿನ ಸಾಧಕ ಐಐಟಿ, ನೀಟ್ ವಿದ್ಯಾರ್ಥಿಗಳಿಗೆ ಅವರ ಗೃಹ ಕಚೇರಿಯಲ್ಲಿ ಸನ್ಮಾನಿಸಿರುವುದು ಶೈಕ್ಷಣಿಕ ಸಾಧನೆಗೆ ತಾಜಾ ನಿದರ್ಶನವಾಗಿದೆ. ಗುರುಬಸವ ಪಟ್ಟದ್ದೇವರು ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಾ. ಚನ್ನ ಬಸದ ಪಟ್ಟದ್ದೇವರು, ಡಾ.ಬಸವಲಿಂಗ ಪಟ್ಟದ್ದೇವರು ತೋರಿದ ದಾರಿಯಲ್ಲಿ ನಡೆಯುತ್ತಿರುವ ಶ್ರೀಗಳು ಬಸವತತ್ವ ಪ್ರಚಾರ, ಪ್ರಸಾರದ ಜತೆಗೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದನ್ನು ಸಮಾಜದ ಪ್ರಮುಖರು, ಚಿಂತಕರು, ಸಾಹಿತಿಗಳು, ರಾಜಕಾರಣಿಗಳು ಮುಕ್ತಕಂಠದಿಂದ ಪ್ರಶಂಶಿಸುತ್ತಾರೆ.ಲೇಖನ - ಶಶಿಧರ ಕೋಸಂಬೆ, ಸದಸ್ಯರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು