ಸಾರಾಂಶ
ಸೋಮವಾರಪೇಟೆ ಸಮೀಪದ ಗರಗಂದೂರು ಬಿ ಗ್ರಾಮದ ಶ್ರೀಗುರು ಬಸವೇಶ್ವರ ದೇವಳದ ವಾರ್ಷಿಕ ಮಹಾಪೂಜೆ ಇತ್ತೀಚೆಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಗಣಪತಿ ಹೋಮ, ಶ್ರೀ ದೇವರ ಮಹಾಪೂಜೆ, ಮಹಾಮಂಗಳಾರತಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿಗೆ ಸಮೀಪದ ಗರಗಂದೂರು ಬಿ ಗ್ರಾಮದ ಶ್ರೀಗುರು ಬಸವೇಶ್ವರ ದೇವಳದ ವಾರ್ಷಿಕ ಮಹಾಪೂಜೆ ಶ್ರದ್ಧಾ ಭಕ್ತಿಯಿಂದ ಇತ್ತೀಚೆಗೆ ನಡೆಯಿತು.ವಿವಿಧೆಡೆಗಳಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಗಣಪತಿ ಹೋಮ, ಶ್ರೀ ದೇವರ ಮಹಾಪೂಜೆ, ಮಹಾಮಂಗಳಾರತಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಇದೇ ಸಂದರ್ಭ ದೇವಾಲಯಕ್ಕೆ ನೂತನ ಆಡಳಿತ ಮಂಡಳಿ ರಚಿಸಿದ್ದು, ಅಧ್ಯಕ್ಷರಾಗಿ ಸಿ.ಕೆ. ರೋಹಿತ್ ಪುನಾಯ್ಕೆಯಾದರು. ಉಪಾಧ್ಯಕ್ಷರಾಗಿ ಕೆ.ಡಿ. ವೀರಪ್ಪ, ಕಾರ್ಯದರ್ಶಿಯಾಗಿ ಅಜಿತಕುಮಾರ್, ಖಜಾಂಚಿಯಾಗಿ ಲಿಖಿತ್ ದಾಮೋದರ್ ಅವರನ್ನು ಆಯ್ಕೆ ಮಾಡಲಾಯಿತು. ಉಪ ಗ್ರಾಮಗಳಿಂದ 13 ಜನ ಸಮಿತಿ ಸದಸ್ಯರು ಆಯ್ಕೆಯಾದರು.ಸುಮಾರು 300 ವರ್ಷಗಳ ಹಳೆಯ ಶ್ರೀ ಗುರು ಬಸವೇಶ್ವರ ದೇವಸ್ಥಾನವನ್ನು 2011ರಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.ಚನ್ನಾಪುರ ಗ್ರಾಮದೇವತೆ ಪೂಜೆ ಸಂಪನ್ನ:
ಸೋಮವಾರಪೇಟೆ ತಾಲೂಕಿನ ಚನ್ನಾಪುರ ಗ್ರಾಮದ ಗ್ರಾಮದೇವತೆ ಪೂಜೆ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.ಗ್ರಾಮದಲ್ಲಿರುವ ದೇವರ ಬನದಲ್ಲಿ ಗ್ರಾಮದ ಹಿರಿಯರು ಪೂಜಾ ಕಾರ್ಯ ನೆರವೇರಿಸಿದರು, ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಪ್ರಕೃತಿಯ ಅರಾಧಕರಾಗಿದ್ದ ನಮ್ಮ ಹಿರಿಯರು, ಬಸರಿ ಮರದ ಬುಡದಲ್ಲಿ ಕಲ್ಲುಗಳನ್ನು ಇಟ್ಟು ನೂರಾರು ವರ್ಷಗಳಿಂದ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಅದನ್ನು ಇಂದಿನ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಗ್ರಾಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ಗ್ರಾಮ ದೇವತೆಗೆ ಪೂಜೆ ಸಲ್ಲಿಸದ ನಂತರವೇ ನಡೆಯುತ್ತವೆ. ನಂಬಿದವರನ್ನು ತಾಯಿ ಯಾವತ್ತು ಕೈಬಿಟ್ಟಿಲ್ಲ ಎಂದು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಎನ್.ಅಶ್ವಥ್ ಹೇಳಿದರು. ಕಾರ್ಯದರ್ಶಿ ಸಿ.ಎಸ್.ವೀರೇಶ್, ಸಿ.ಎನ್.ಅಶೋಕ್, ಸಿ.ಎ.ಗಣೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.