ಸಾರಾಂಶ
ತಾಲೂಕಿನಲ್ಲಿ ಗುರುತಿಸಲ್ಪಟ್ಟಿರುವ 466 ಬ್ಲಾಕ್ ಗಲ್ಲೂ ಗಣತಿದಾರರು ತರಬೇತಿ ವೇಳೆ ತಮಗೆ ಸೂಚಿಸಿದ ರೀತಿಯಲ್ಲೇ ಗಣತಿಕಾರ್ಯ ನಡೆಸಬೇಕು
ಕನ್ನಡಪ್ರಭ ವಾರ್ತೆ ಹುಣಸೂರು
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಆರಂಭಗೊಂಡಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಾದ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಗಣತಿದಾರರಿಗೆ ಸಮೀಕ್ಷೆಗೆ ಅಗತ್ಯವಿರುವ ಪರಿಕರಗಳ ಕಿಟ್ ಗಳನ್ನು ತಹಸೀಲ್ದಾರ್ ಜೆ. ಮಂಜುನಾಥ್ ವಿತರಿಸಿದರು.ಪಟ್ಟಣದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಗಣತಿದಾರರಿಗೆ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಗುರುತಿಸಲ್ಪಟ್ಟಿರುವ 466 ಬ್ಲಾಕ್ ಗಲ್ಲೂ ಗಣತಿದಾರರು ತರಬೇತಿ ವೇಳೆ ತಮಗೆ ಸೂಚಿಸಿದ ರೀತಿಯಲ್ಲೇ ಗಣತಿಕಾರ್ಯ ನಡೆಸಬೇಕು. ಗಣತಿಗಾಗಿ ಸರ್ಕಾರ ರೂಪಿಸಿರುವ ಮೊಬೈಲ್ ಆಪ್ ಗಳಲ್ಲಿ ತಾಂತ್ರಿಕ ಸಮಸ್ಯೆಗಳೇನಾದರೂ ಕಂಡುಬಂದಲ್ಲಿ ತಕ್ಷಣ ಮಾಸ್ಟರ್ ಟ್ರೈನರ್ ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.ತಾಲೂಕಿನಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿಕ್ಷಕರನ್ನು ಗಣತಿಕಾರ್ಯಕ್ಕೆ ನಿಯೋಜಿಸಿಕೊಂಡಿಲ್ಲ. ಆದರೆ ಮಿಕ್ಕವರು ಕಡ್ಡಾಯವಾಗಿ ನಿಗದಿತ ಅವಧಿಯೊಳಗೆ ಗಣತಿಕಾರ್ಯ ನಡೆಸಬೇಕು. ನಿಮ್ಮೆಲ್ಲರ ಸಕಾರಾತ್ಮಕ ಕರ್ತವ್ಯ ನಿರ್ವಹಣೆಯಿಂದ ಗಣತಿಕಾರ್ಯ ಯಶಸ್ಸು ಸಾಧಿಸಲಿ ಎಂದು ಆಶಿಸಿದರು.
ಮೈಸೂರು ಜಿಲ್ಲೆಯ ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯ ಪ್ರಾಂಶುಪಾಲೆ ಹಾಗೂ ಪದನಿಮಿತ್ತ ಜಿಲ್ಲಾ ಸಹನಿರ್ದೇಶಕಿ ರಾಜಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಮಾತನಾಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆರತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಬಿ.ಶಶಿಕುಮಾರ್, ಸರ್ಕಾರಿ ನೌಕರರ ಸಂಘದ ಕ್ರೀಡಾಕಾರ್ಯದರ್ಶಿ ಮಹದೇವ್ ಸೇರಿದಂತೆ ಗಣತಿದಾರರು ಇದ್ದರು.