ಸಾರಾಂಶ
ಸಮಾಜದಲ್ಲಿ ನಾವು ಗಳಿಸಿದ ಆಸ್ತಿ, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ ಗುರು ಶಿಷ್ಯರ ಬಾಂಧವ್ಯ ಮತ್ತು ಗುರುಗಳಿಂದ ಕಲಿತ ವಿದ್ಯೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಎಂದು ಶಿಕ್ಷಕ ಎಚ್. ಎನ್. ನಾಗರಾಜ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಸಮಾಜದಲ್ಲಿ ನಾವು ಗಳಿಸಿದ ಆಸ್ತಿ, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ ಗುರು ಶಿಷ್ಯರ ಬಾಂಧವ್ಯ ಮತ್ತು ಗುರುಗಳಿಂದ ಕಲಿತ ವಿದ್ಯೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಎಂದು ಶಿಕ್ಷಕ ಎಚ್. ಎನ್. ನಾಗರಾಜ್ ತಿಳಿಸಿದರು.ತಾಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ 1988-89 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ 36ನೇ ವರ್ಷದ ಸವಿನೆನಪು ಅಂಗವಾಗಿ ಶ್ರೀಮತಿ ಚಿಕ್ಕವೀರಮ್ಮ ಪುಟ್ಟರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಸಮಾಜದಲ್ಲಿ ಗುರು ಮತ್ತು ಶಿಷ್ಯನ ಬಾಂಧವ್ಯ ಅಮೂಲ್ಯ ಶಿಷ್ಯ ಜೀವನದಲ್ಲಿ ಯಶಸ್ಸು ಕಂಡರೆ ಗುರುವಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ ಎಂದರು. ಇದೇ ವೇಳೆಯಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯ ಸ್ನೇಹಿತರನ್ನು ಕಂಡು ಖುಷಿ ಪಟ್ಟರೆ ,ಗುರುಗಳನ್ನು ಕಂಡ ನೆಚ್ಚಿನ ವಿದ್ಯಾರ್ಥಿಗಳು ಪಾದಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದಿತ್ತು.ಹಳೆ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುವಂದನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಗುರುಗಳಾದ ಚಿಕ್ಕಪ್ಪಯ್ಯ, ಎಸ್. ಚಂದ್ರಶೇಖರ್, ಎ. ರಾಜಪ್ಪ, ನಂದೀಶ್, ಎಸ್. ವಿ. ರಾಜಗೋಪಾಲ್, ಹಳೆಯ ವಿದ್ಯಾರ್ಥಿ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ರಾಜಣ್ಣ, ಆಂಜನೇಯ, ಪ್ರಕಾಶ್ ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.