ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಗುರು-ಶಿಷ್ಯರ ನಡುವಿನ ಸಂಬಂಧ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗುರು ಶಿಷ್ಯರ ನಡುವಿನ ಸಂಬಂಧದ ಶ್ರೇಷ್ಠತೆಯನ್ನು ಇಂದಿನ ಯುವ ಜನಾಂಗ ಅರಿಯಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಿವಿಮಾತು ಹೇಳಿದರು.ಇಲ್ಲಿನ ಸಮುದಾಯ ಭವನದಲ್ಲಿ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ್ ಪ್ರೇರಿತ ಎಂಪಿಎಸ್ ಮತ್ತು ಎಂಎಚ್ಎಂ ಶಾಲೆಗಳ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಹಮ್ಮಿಕೊಂಡ ಕಲಿತ ಶಾಲೆಗೆ ಅಕ್ಷರ ತೋರಣ ಹಾಗೂ ಗುರು ಶಿಷ್ಯರ ಮಹಾಸಂಗಮ ಕಾರ್ಯಕ್ರಮದಲ್ಲಿ ಶುಕ್ರವಾರ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹುಟ್ಟಿದ ಊರು, ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಷ್ಟದಲ್ಲಿ ಸಹಾಯ ಮಾಡಿದವರನ್ನು ಎಂದೂ ಮರೆಯಬಾರದು. ಉತ್ತಮ ತಾಯಿ ನೂರು ಜನ ಶಿಕ್ಷಕರಿಗೆ ಸಮ. ಗುರು ಶಿಷ್ಯರ ಸಂಬಂಧ ಉತ್ತಮವಾಗಿರಬೇಕು ಎಂದರು.
ನಾನು ಶಿಕ್ಷಣ ಸಚಿವನಾಗಿದ್ದಾಗ 1039 ಪ್ರೌಢ ಶಾಲೆ ಮತ್ತು 500 ಪಿಯು ಕಾಲೇಜುಗಳನ್ನು ಮಂಜೂರು ಮಾಡಿ ₹5 ಸಾವಿರ ಕೋಟಿಗಳನ್ನು ಕಟ್ಟಡಕ್ಕಾಗಿ ದೊರಕಿಸಿಕೊಟ್ಟಿದ್ದನ್ನು ನೆನಪಿಸಿಕೊಂಡರು. ಅಲ್ಲದೆ, ಆಲಮಟ್ಟಿಯ ಎಂಎಚ್ಎಂ ಶಿಕ್ಷಣ ಸಂಸ್ಥೆಯವರು ಡಿಪ್ಲೋಮಾ ಹಾಗೂ ಐಟಿಐ ಕಾಲೇಜ್ ಆರಂಭಿಸಲು ಪ್ರಸ್ತಾವ ಸಲ್ಲಿಸಿದರೆ ಮಂಜೂರು ಮಾಡಿಸುವ ಜವಾಬ್ದಾರಿ ನನ್ನದಾಗಿದೆ. ಎಂದು ಆಶ್ವಾಸನೆ ನೀಡಿದರು.ಕೃಷಿ ಪ್ರಧಾನವಾದ ಕುಟುಂಬದಲ್ಲಿ ಬೆಳೆದಿದ್ದ ತಾವು 8ನೇ ತರಗತಿಯಲ್ಲಿರುವಾಗಲೇ ಅನಕ್ಷರಸ್ಥೆಯಾಗಿದ್ದ ತಮ್ಮ ಅಕ್ಕನಿಗೆ ಬಾಲ್ಯವಿವಾಹವಾಗಿದ್ದನ್ನು ನೆನಪಿಸಿಕೊಂಡರು. ಇದು ನನ್ನ ಮನಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಮುಂದೆ ನಾನು ಶಿಕ್ಷಣ ಸಚಿವನಾದ ಬಳಿಕ ಹೆಣ್ಣು ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡಿದೆ. ಅಕ್ಕನ ಅನಕ್ಷರತೆಯೇ ಹೆಣ್ಣು ಮಕ್ಕಳ ಕಲಿಕೆಗೆ ಆದ್ಯತೆ ನೀಡಲು ಮೂಲ ಕಾರಣವಾಯ್ತು ಎಂದು ವಿವರಿಸಿದರು.
ಮುಂಡರಗಿ ತೋಂಟದಾರ್ಯಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ಮಾತನಾಡಿ, ಬಸವಣ್ಣನವರು ಸಾವಿರ ವರ್ಷಗಳ ಹಿಂದೆ ಅಕ್ಷರದ ಕ್ರಾಂತಿ ಮಾಡಿದರು. ಹೀಗಾಗಿ ಕೆಳವರ್ಗದ ಜನರೂ ವಚನ ಬರೆಯುವಂತಾಯಿತು. ಕನ್ನಡ ಭಾಷೆ ಉಳಿವಿಗೆ ಬಸವಣ್ಣನವರು ಅನ್ಯ ರಾಜ್ಯಗಳಿಂದ ವಚನಕಾರರಿಂದ ಕನ್ನಡದಲ್ಲಿಯೇ ವಚನಗಳನ್ನು ಬರೆಸಿದರು. ಪ್ರಜಾಪ್ರಭುತ್ವ ಚಿಂತನೆ ಆರಂಭವಾಗಿದ್ದೆ ಬಸವನಬಾಗೇವಾಡಿಯಲ್ಲಿ. ಅದನ್ನು ಕಟ್ಟಿದವರು ಬಸವಣ್ಣನವರು. ಪ್ರಜಾಪ್ರಭುತ್ವ ಜಾರಿಗಾಗಿಯೇ ವಚನಕ್ರಾಂತಿ ಮಾಡಿದರು ಎಂದ ಅವರು, ವಿಜಯಪುರ ಜಿಲ್ಲೆ ಶರಣರ ಕಾಲದಲ್ಲಿಯೇ ಶಿಕ್ಷಣ ಕ್ರಾಂತಿ ಮಾಡಿದ ಜಿಲ್ಲೆಯಾಗಿದೆ ಎಂದು ವಿಶ್ಲೇಷಿಸಿದರು.ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಇದೊಂದು ಹೃದಯ ಸ್ಪರ್ಶಿ ಹಾಗೂ ಮಾದರಿಯಾದ ಕಾರ್ಯಕ್ರಮ. ಕಲಿತ ಶಾಲೆಯನ್ನು ನೆನಪಿಸಿಕೊಂಡು ಗುರುನಮನ ಜತೆಗೆ ಶಾಲೆ ಕುರಿತ ಅಭಿನಂದನ ಗ್ರಂಥ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಕೆ.ಪಿ. ಮಾತನಾಡಿದರು. ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬೇಲೂರಿನ ಗುರುಬಸವ ಮಠದ ಮಹಾಂತ ಸ್ವಾಮೀಜಿ, ಗದಗದ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸದಾಶಿವ ದಳವಾಯಿ ಸೇರಿದಂತೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಎಂಪಿಎಸ್ ಮತ್ತು ಎಂಎಚ್ಎಂ ಪ್ರೌಢ ಶಾಲೆಯ ಸುಮಾರು 70 ನಿವೃತ್ತ ಹಾಗೂ ಹಾಲಿ ಗುರುಗಳು-ಗುರುಮಾತೆಯರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ನುಗ್ಲಿ, ಸಂಗಮೇಶ ಮೆಣಸಿನಕಾಯಿ, ವಿಠ್ಠಲ್ ಪಾಟೀಲ್, ಸಾವಿತ್ರಿ ಹಿರೇಗೊಂಡ, ಶೈಲಶ್ರೀ ಜೋಶಿ, ತನುಜಾ ಪೂಜಾರಿ, ಸಂಗಮೇಶ ಚನ್ನಿಗಾವಿ ಮುಂತಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ಎಂಬ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ಹಳೆ ವಿದ್ಯಾರ್ಥಿಗಳು ಸಂಚಾದ ನಡೆಸಿದರು.---------------
ಕೋಟ್ಬಹುತೇಕ ಶಾಸಕರು ತಮ್ಮ ಅನುದಾನವನ್ನು ಕೇವಲ ದೇವಸ್ಥಾನ ಮತ್ತು ಸಮುದಾಯ ಭವನಗಳಿಗೆ ನೀಡುವ ಬದಲು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕು. ದೇಶ ಮುಂದುವರೆಯಲು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು.
-ಸಂಯುಕ್ತಾ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕಿ