ಸಾರಾಂಶ
ಶ್ರೀ ಸಿದ್ಧಾರೂಢ ಮಠದಲ್ಲಿ ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.ಬೆಳಗ್ಗೆ ಕಾಕಡಾರತಿ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಶ್ರೀಗಳ ಮಠದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ನಡೆಯಿತು.
ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢ ಮಠದಲ್ಲಿ ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಕಾಕಡಾರತಿ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಶ್ರೀಗಳ ಮಠದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ನಡೆಯಿತು.ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಾಡನಕೊಪ್ಪ ಪೂರ್ಣಾನಂದ ಆಶ್ರಮದ ನ್ಯಾಯವೇದಾಂತಾಚಾರ್ಯ ದಯಾನಂದ ಸರಸ್ವತಿ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಉಪದೇಶವಾಗಿ ಅವರಿಂದ ಜ್ಞಾನ ಸಂಪಾದನೆ ಪಡೆದು ತನ್ನ ಜೀವನವನ್ನು ಪರಿಪೂರ್ಣವಾಗಿ ನಡೆಸಬೇಕಾದರೆ ಗುರುಪದೇಶ ಮುಖ್ಯ ಘಟ್ಟವಾಗಿದೆ ಎಂದರು.
ನೇತೃತ್ವ ವಹಿಸಿದ್ದ ಚಿಕ್ಕನಂದಿಯ ಸಿದ್ಧಾರೂಢ ದರ್ಶನಪೀಠದ ಪೀಠಾಧ್ಯಕ್ಷ ಸಹಜಾನಂದ ಶ್ರೀಗಳು ಮಾತನಾಡಿ, ಗುರುವಿನ ಉಪದೇಶ ಆಗದ ಹೊರತು ಅವನು ಪರಿಪೂರ್ಣ ಮನುಷ್ಯನಾಗುವುದಿಲ್ಲ ಎಂದರು.ಶ್ರೀಮಠದ ಟ್ರಸ್ಟ್‌ನ ಚೇರಮನ್ ಚೆನ್ನವೀರ ಮುಂಗುರವಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಗಳನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಧರ್ಮದರ್ಶಿ ಎಸ್.ಐ. ಕೋಳಕೂರ ಕಾರ್ಯಕ್ರಮ ನಿರೂಪಿಸಿದರು.
ರನ್ನಬೆಳಗಲಿಯ ಸದಾಶಿವ ಗುರೂಜಿ, ತಳಕಟನಾಳದ ಆತ್ಮಾನಂದ ಶ್ರೀಗಳು, ಶಾಂತಾನಂದ ಶ್ರೀಗಳು, ಹುಬ್ಬಳ್ಳಿ ಶಶಿಕಲಾ ಮಾತಾ, ಟ್ರಸ್ಟ್ ಕಮಿಟಿಯ ಭಕ್ತರ ಮೇಲ್ಮನೆ ಸಭಾಧ್ಯಕ್ಷ ಡಿ.ಆರ್. ಪಾಟೀಲ, ಧರ್ಮದರ್ಶಿ ಉದಯಕುಮಾರ ನಾಯ್ಕ, ಗೀತಾ ಕಲಬುರ್ಗಿ, ವಸಂತ ಸಾಲಗಟ್ಟಿ. ಬಾಳು ಮಗಜಿಕೊಂಡಿ, ಶ್ರೀಮಠದ ಮ್ಯಾನೇಜರ್ ಈರಣ್ಣ ತುಪ್ಪದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.