ಗುರುಶಿಷ್ಯ ಪರಂಪರೆಯ ಆದರ್ಶವನ್ನಿಟ್ಟು ಧರ್ಮ ರಕ್ಷಿಸೋಣ

| Published : Jul 11 2025, 11:48 PM IST

ಸಾರಾಂಶ

ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ. ಪ್ರಸ್ತುತ ಕಾಲದಲ್ಲಿಯೂ ಇಂತಹ ಸಂಘಟನೆಯ ಆವಶ್ಯಕತೆ ಇದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ದೀಪಾ ತಿಲಕ್ ಕರೆ ನೀಡಿದರು.

ವಿಶ್ವೇಶ್ವರನಗರದ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ ಘಟನೆಗಳು ಬೆಳಕಿಗೆ ಬಂದಿವೆ, ಮಂಡ್ಯದಲ್ಲಿ ಮತಾಂಧರು ಗೋಹತ್ಯೆ ಮಾಡುತ್ತಿರುವಾಗ ಅನೇಕ ಹಿಂದೂಗಳು ಗೋರಕ್ಷಣೆ ಮಾಡಲು ಮುಂದಾದರೆ ಪೊಲೀಸರು ಗೋರಕ್ಷಕರನ್ನೇ ಬಂಧಿಸಿದರು. ವಕ್ಫ್ ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಮತಾಂಧರು ಗಲಭೆ ನಡೆಸಿದ್ದಾಗಿ ಅವರು ಹೇಳಿದರು.

ಪೊಲೀಸರ ಮೇಲೂ ಆಕ್ರಮಣ ನಡೆಯಿತು. ಹಿಂದೂಗಳ ಮನೆಗಳು, ಅಂಗಡಿಗಳನ್ನು ಸುಡಲಾಯಿತು. ಉತ್ತರಪ್ರದೇಶ, ರಾಜಸ್ಥಾನ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಮತಾಂಧರು ಕಲ್ಲು ತೂರಿ ಹಿಂಸಾಚಾರ ನಡೆಸಿದರು. ಒಟ್ಟಾರೆ ಅಂಶವೇನೆಂದರೆ, ಭಾರತದ ಮೇಲೆ ಆಂತರಿಕ ಮತ್ತು ಬಾಹ್ಯ ಶತ್ರುಗಳಿಂದ ನಡೆಯುತ್ತಿರುವ ಆಕ್ರಮಣಗಳು ಕೇವಲ ವಿಸ್ತರಣಾವಾದಕ್ಕಾಗಿ ಅಲ್ಲ, ಬದಲಾಗಿ ಹಿಂದೂ ಧರ್ಮವನ್ನು ನಾಶಪಡಿಸಲು ನಡೆಯುತ್ತಿವೆ. ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದೇಶ ಕೇಳಿ ಗುಂಡು ಹಾರಿಸದೆ, ಧರ್ಮ ಕೇಳಿ ಗುಂಡು ಹಾರಿಸಿದರು. ಇನ್ನು ನಮ್ಮ ಮುಂದೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಮತಾಂತರದಂತಹ ಅನೇಕ ಸಮಸ್ಯೆಗಳು ಇವೆ. ಇದೆಲ್ಲವನ್ನು ನೋಡಿದಾಗ ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮಸಂಕಟ ಎದುರಿಗಿದ್ದವು. ಈ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಹಾಗಾಗಿ ಗುರುಶಿಷ್ಯ ಪರಂಪರೆಗೆ ಹಿಂದಿನಿಂದಲೂ ಅಷ್ಟೇ ಮಹತ್ವವಿದೆ ಎಂದು ಹೇಳಿದರು.

ವಕೀಲ ಸಿ.ವಿ. ಕೇಶವಮೂರ್ತಿ ಮಾತನಾಡಿ, ಸದ್ಯದ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂಘಟನೆ ಅತ್ಯಂತ ಮಹತ್ತ್ವ ಪೂರ್ಣ ಅವಶ್ಯಕತೆ ಆಗಿದೆ. ಹಿಂದುತ್ವದ ಕಾರ್ಯದಲ್ಲಿ ತಮ್ಮ 40ವರ್ಷಗಳ ಸೇವೆಯ ಆಧಾರದಲ್ಲಿ ಮಾರ್ಗದರ್ಶನವನ್ನು ಮಾಡುತ್ತಾ ಕೆಲವು ಮಹತ್ವಪೂರ್ಣ ಅಂಶ ಹಂಚಿಕೊಂಡರು. ಸಾಧಾರಣವಾಗಿ ಗುರುಪೂರ್ಣಿಮೆಯಂದು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನ ಇರುತ್ತದೆ, ಆದರೆ ಇಲ್ಲಿ ಆಠವಲೆಯವರ ಮಾರ್ಗದರ್ಶನದಂತೆ ಸ್ವಸಂರಕ್ಷಣೆಯ ಮಹತ್ವದ ಬಗ್ಗೆ ಹಾಗೂ ಸಂಘಟನೆ ಬಗ್ಗೆ ಹೇಳಲಾಗುತ್ತಿರುವುದು ಅತ್ಯಂತ ವಿಶೇಷ ಎಂದರು.

ಲೇಖಕ ಪ್ರವೀಣ್ ಮಾವಿನಕಾಡು, ಶ್ರೀರಾಮಸೇನೆಯ ಬಿ.ಸಿ. ಶಶಿಕಾಂತ್ ಸೇರಿದಂತೆ 300 ಕ್ಕೂ ಅಧಿಕ ಮಂದಿ ಇದ್ದರು.