ಗುರುವಿಗೆ ಕೃತಜ್ಞತೆ ಸಲ್ಲಿಸುವುದೇ ಗುರು ಪೂರ್ಣಿಮೆ

| Published : Jul 11 2025, 01:47 AM IST

ಗುರುವಿಗೆ ಕೃತಜ್ಞತೆ ಸಲ್ಲಿಸುವುದೇ ಗುರು ಪೂರ್ಣಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಞಾನದಿಂದ ಸುಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ, ಕಠಿಣತೆಯಿಂದ ಸರಳತೆಯ ಕಡೆಗೆ, ಭಯದಿಂದ ನಿರ್ಭಯದ ಕಡೆಗೆ ಸೆಳೆದುಕೊಂಡು ಹೋಗುವ ಒಂದು ಅಧ್ಬುತವಾದ ಶಕ್ತಿಯೇ ಗುರುಗಳು.

ಕನ್ನಡಪ್ರಭ ವಾರ್ತೆ ವಿಜಯಪುರ

ಗುರುಪೂರ್ಣಿಮಾ ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಗುರುಪೂರ್ಣಿಮೆ ಎಂದು ಆಚರಿಸುತ್ತಾರೆ. ಗುರು ಎನ್ನುವ ಶಬ್ಧವು ಗು ಮತ್ತು ರು ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವುದು ಎಂದರ್ಥವಾಗುತ್ತದೆ ಎಂದು ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ ಹೇಳಿದರು.

ನಗರದ ಬರಟಗಿ ರಸ್ತೆಯಲ್ಲಿರುವ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಎಸ್.ಕುಮಾರ ಮಹೇಶ ಪಿಯು ಸೈನ್ಸ್ ಕಾಲೇಜಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಎಸ್‌.ಕುಮಾರ, ಬಹುತೇಕ ಜನರು ತಮ್ಮ-ತಮ್ಮ ಗುರುಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತಾರೆ. ಆದ್ದರಿಂದ ಈ ಗುರುಪೂರ್ಣಿಮೆಯು ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ಶೈಕ್ಷಣಿಕ ಪ್ರಾಮುಖ್ಯತೆಯು ಸಹ ಪಡೆದಿದೆ. ಈ ದಿನವು ಗುರುಗಳ ಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸುವ ದಿನವಾಗಿದೆ. ಇಂತಹ ಮಹಾನ್‌ ಗುರುಗಳ ಋಣ ತೀರಿಸುವುದು ಅಸಾಧ್ಯ. ಆದರೂ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು ಗುರುಪೂರ್ಣಿಮೆ ಆಚರಿಸುವುದರ ಉದ್ದೇಶವಾಗಿದೆ ಎಂದರು.

ಶಿಕ್ಷಕಿ ಸುಜಾತಾ ಜೋರಾಪೂರ ಮಾತನಾಡಿ, ಅಜ್ಞಾನದಿಂದ ಸುಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ, ಕಠಿಣತೆಯಿಂದ ಸರಳತೆಯ ಕಡೆಗೆ, ಭಯದಿಂದ ನಿರ್ಭಯದ ಕಡೆಗೆ ಸೆಳೆದುಕೊಂಡು ಹೋಗುವ ಒಂದು ಅಧ್ಬುತವಾದ ಶಕ್ತಿಯೇ ಗುರುಗಳು. ಇಂತಹ ಗುರುಗಳನ್ನು ನಿಮ್ಮ ಜೀವನದಲ್ಲಿ ಗೌರವಿಸಿ ಪೂಜಿಸಿ ಸತ್ಕರಿಸಿದರೆ ಸುಖ, ಶಾಂತಿ, ನೆಮ್ಮದಿ ದೊರಕುವುದಲ್ಲದೆ ಜೀವನದ ಮುಕ್ತಿ ಹೊಂದಬಹುದು. ಬದುಕುವುದನ್ನು ಯಾರಿಂದ ಕಲಿಯುತ್ತಿರೋ ಅವರಿಗೆ ಕೃತಜ್ಞತೆ ಸಲ್ಲಿಸುವ ದಿನ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಿರುವುದಿಲ್ಲ ಜೀವನ ಪರ್ಯಂತ ನಡೆಯುವ ಪ್ರಕ್ರಿಯೆಯಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ, ಕಾಲೇಜಿನ ಪ್ರಾಚಾರ್ಯ ಸದಾಶಿವ ವಾಲಿಕಾರ, ಮುಖ್ಯಗುರು ಪ್ರಶಾಂತ ಹಿರೇಮಠ, ಶಾಲಾ-ಕಾಲೇಜಿನ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗಿಯಾಗಿದ್ದರು.